ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಅಪರಿಚಿತ ಕಿಡಿಗೇಡಿಗಳು ಹೂ ಬಿಡುವ ಹಂತಕ್ಕೆ ಬಂದಿದ್ದ ಟೊಮೇಟೊ ಸಸಿಗಳನ್ನು ಕಿತ್ತು ಬಿಸಾಡಿರುವ ಘಟನೆ ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಲೇಟ್ ಶಿವಣ್ಣ ಅವರ ಮಗ ಮಂಜುನಾಥ್ ರವರಿಗೆ ಸೇರಿದ ಜಮೀನಿನಲ್ಲಿ ಟೊಮೇಟೊ, ಬೀನ್ಸ್ ಬೆಂಡೆಕಾಯಿ ಸೇರಿದಂತೆ ತರಕಾರಿಗಳನ್ನು ನಾಟಿ ಮಾಡಿದ್ದು ನಿನ್ನೆ ರಾತ್ರಿ ಯಾರೋ ಕಿಡಿಗೇಡಿಗಳು ಹೂ ಬಿಡುವ ಹಂತಕ್ಕೆ ಬಂದಿದ್ದ ಟೊಮೇಟೊ ಸಸಿಗಳನ್ನು ಕಿತ್ತು ಪಕ್ಕದ ಚಾಮರಾಜ ನಾಲೆಯ ಏರಿ ಮೇಲೆ ಹಾಕಿ ಹೋಗಿದ್ದು ಈ ಹಿಂದೆ ಇದೇ ಜಾಗದಲ್ಲಿ ರಾಮಕೃಷ್ಣ ಎಂಬವರಿಗೆ ಸೇರಿದ ಭತ್ತದ ಪೈರಿಗೆ ನಾಟಿ ಮುನ್ನಾದಿನ ಕಳೆ ನಾಶಕ ಸಿಂಪಡಿಸಿ ಎರಡು ಎಕರೆ ಭತ್ತದ ಪೈರು ನಾಶವಾಗಿತ್ತು.

ಈ ಕುರಿತು ಚುಂಚನಕಟ್ಟೆ ಉಪ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಪರಿಶೀಲನೆ ನಡೆಸಲಾಯಿತು. ಈ ಸಂಬಂಧ ಹೊಸೂರು ಡೈರಿ ಮಾಜಿ ಅಧ್ಯಕ್ಷ ಸ್ವಾಮಿ ಮಾತನಾಡಿ ಯಾವುದೇ ರೈತ ಬೆಳೆದ ಬೆಳೆಯನ್ನು ನಾಶ ಮಾಡುವಷ್ಟು ವೈರತ್ವ ಯಾರಿಗೂ ಇರಬಾರದು ಇಂತಹ ಘಟನೆಗಳು ಗ್ರಾಮದಲ್ಲಿ ಪದೇ ಪದೇ ಜರುಗುತ್ತಿದ್ದು ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.



