ಕನಕಪುರ : ಜಾಗತಿಕ ಬದಲಾವಣೆಯಿಂದಾಗಿ ಕರ್ನಾಟಕದ ಮೂಲ ದೇಶಿ ಕಲೆಗಳು ಕಣ್ಮರೆಯಾಗುತ್ತಿರುವುದು ದುರಂತ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದರು.
ನಗರದ ರೋಟರಿ ಭವನದಲ್ಲಿ ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ (ರಿ.)ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದೊಂದಿಗೆ ಏರ್ಪಡಿಸಿದ್ದ ರಾಜ್ಯಮಟ್ಟದ ಜಾನಪದ ಸಂಸ್ಕೃತಿ ಕಲೋತ್ಸವ – 2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಧುನಿಕತೆಗೆ ಮಾರುಹೋಗುತ್ತಿರುವ ಇಂದಿನ ಯುವಕರು ನಮ್ಮ ಮೂಲ ಜಾನಪದ ಕಲೆ ಸಾಹಿತ್ಯ ಸಂಸ್ಕೃತಿ ಪರಂಪರೆಯ ಇತಿಹಾಸವನ್ನು ಮರೆತು ಪಾಶ್ಚಿಮಾತ್ಯ ಸಂಸ್ಕೃತಿಗೆ ಮರೆತು ಹೋಗುತ್ತಿರುವ ಸಂದರ್ಭದಲ್ಲಿ ಮಾತೃಶ್ರೀ ನಮನ ಸಂಸ್ಥೆ ನಿರಂತರವಾಗಿ ಕಾರ್ಯಕ್ರಮ ಆಯೋಜಿಸಿ ಜಾನಪದ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.
ಕಾಮನ್ ಮ್ಯಾನ್ ಸಿನಿಮಾದ ನಿರ್ಮಪಕ ನಟ ಡಾ. ಎನ್ ನರಸಿಂಹಮೂರ್ತಿ ಮಾತನಾಡಿ, ಯಾವುದೇ ವಿದ್ಯೆಗಳಿಲ್ಲದ ನಮ್ಮ ಪೂರ್ವಿಕರ ಅಂತಕರಣದಿಂದ ಉದಯಿಸಿದ ಜಾನಪದ ವಿವಿಧ ಪ್ರಕಾರಗಳಲ್ಲಿ ಸರ್ವರನ್ನು ಸಮಾನತೆ ಮತ್ತು ಗೌರವದಿಂದ ಬದುಕಲು ದಾರಿ ದೀಪವಾಗಿವೆ ಹಾಗಾಗಿ ಪ್ರಸ್ತುತ ಮಾನವೀಯ ಮೌಲ್ಯಗಳನ್ನು ಪ್ರೇರೇಪಿಸುವ ಹೆಚ್ಚಿನ ಚಲನಚಿತ್ರಗಳು ತೆರೆಗೆ ಬರುವಂತಾಗಬೇಕು ಆಗ ಮಾತ್ರ ನಮ್ಮ ಮೂಲ ಜಾನಪದದ ಆಶಯಗಳನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ ಮಾತನಾಡಿ, ಗಡಿಭಾಗದ ಕನ್ನಡ ಶಾಲೆಗಳ ಅಭಿವೃದ್ಧಿಗೆ ಹಾಗೂ ಕನ್ನಡ ಕಲಿಕಾ ಶಿಬಿರಗಳು ಸೇರಿದಂತೆ ಹಲವು ಬಗೆಯ ಸಾಮಾಜಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಮಾತೃಶ್ರೀ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ. ಚಂದ್ರ ಎಂ (ನಮನ ಚಂದ್ರು) ಮಾತನಾಡಿ, ವಿದ್ಯಾರ್ಥಿ ಯುವ ಸಮುದಾಯಕ್ಕೆ ಜಾನಪದ ತರಬೇತಿ ನೀಡಿ ಕಲಾವಿದರ ಕ್ಷೇತ್ರಕಾರ್ಯ ಮೂಲಕ ಕಲಾವಿದರು, ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಿರಂತರವಾಗಿ ಜಾನಪದ ಹಾಗೂ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಸಮಾಜ ಸೇವಕ ಡಾ. ಡಿ ವೆಂಕಟರಮಣ ಸ್ವಾಮಿ( ಗುಂಡಣ್ಣ) ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ದಕ್ಷಿಣ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಕೆ ಸತೀಶ್, ಸಮಾಜ ಯುವಕರಾದ ಜಿ.ಬಿ ಲೋಹಿತ್ ಕುಮಾರ್, ಬಿ ಎಂ ರಮೇಶ್ ಕುಮಾರ್ ಜಾನಪದ ಮೆರವಣಿಗೆಗೆ ಚಾಲನೆ ನೀಡಿದರು.
ಇದು ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿನ ಸಾಧಕರಾದ ಕನಕಪುರ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಕೆ ಹರೀಶ್, ಪರಿಸರ ಪ್ರೇಮಿ ಮರಸಪ್ಪ ರವಿ,ಹಿರಿಯ ಜನಪ್ರಿಯ ವೈದ್ಯರಾದ ಡಾ. ಪ್ರತಿಮಾದೇವಿ , ಡಾ. ಮಂಜುನಾಥ್,ಡಾ. ಶಶಿಧರ್,ಉದ್ಯಮಿ ಹೊಸಕೋಟೆ ವೆಂಕಟೇಶ್ ಮೂರ್ತಿ, ಡಿಎಸ್ ಲಕ್ಷ್ಮಣಸ್ವಾಮಿ, ನಟಿ ಕಾವ್ಯ ಗೌಡ, ಪೋಲಿಸ್ ಮಲ್ಲೇಶ್, ಡಾ.ರಮೇಶ್ ಹೆಚ್ ಕಿತ್ತೂರ, ಸುಧಾರಾಣಿ, ಕೆ ಟಿ ಲಕ್ಷ್ಮಮ್ಮ ಕುಮಾರಸ್ವಾಮಿ ಡಾ. ಕೆ ಟಿ ವೆಂಕಟೇಶ್, ಕಿರಣ್ ಸೂರ್ಯ, ಸಿದ್ದರಾಜು, ಮಹೇಶ್ ಸೇರಿದಂತೆ 50 ಸಾಧಕರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಜ್ಯಮಟ್ಟದ ಜಾನಪದ ಸಂಸ್ಕೃತಿ ಕಲೋತ್ಸವದ ಅಂಗವಾಗಿ ರಾಷ್ಟ್ರಮಟ್ಟದ ಸುಮಾರು 30 ಕ್ಕೂ ಹೆಚ್ಚು ವಿವಿಧ ಗಾಯನ ಮತ್ತು ಜಾನಪದ ಕಲಾ ಪ್ರಕಾರದ ತಂಡಗಳು ಭಾಗವಹಿಸಿ ತಮ್ಮ ಕಲಾ ಪ್ರದರ್ಶನ ನೀಡಿದರು.



