ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಯಲ್ಲಿ ನಡೆಸಿದ ಸಮಗ್ರ ಪರಿಶೀಲನೆಯ ವೇಳೆ 3,89,784 ಅನರ್ಹ ಫಲಾನುಭವಿಗಳು ಪತ್ತೆಯಾಗಿದ್ದು, ಅವರ ಹೆಸರನ್ನು ಯೋಜನೆಯ ಪಟ್ಟಿಯಿಂದ ಕೈಬಿಡಲಾಗಿದೆ. ಇದರಿಂದ ಸರ್ಕಾರಕ್ಕೆ ಪ್ರತಿ ತಿಂಗಳು ಸುಮಾರು ₹77 ಕೋಟಿ ಉಳಿತಾಯವಾಗುತ್ತಿದೆ ಎಂದು ತಿಳಿದುಬಂದಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿವಿಧ ಸರ್ಕಾರಿ ದತ್ತಾಂಶಗಳ ಆಧಾರದ ಮೇಲೆ ನಡೆಸಿದ ಪರಿಶೀಲನೆಯಲ್ಲಿ ಆದಾಯ ತೆರಿಗೆ ಹಾಗೂ ಜಿಎಸ್ಟಿ ಪಾವತಿಸುತ್ತಿರುವ 1,94,560 ಮಂದಿ ಮತ್ತು ಮರಣ ಹೊಂದಿದ 1,95,224 ಮಂದಿಯ ಹೆಸರಿನಲ್ಲಿ ಸಹ ಯೋಜನೆಯ ಹಣ ಜಮೆಯಾಗುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದಿವೆ.
ಮಾರ್ಚ್ ತಿಂಗಳಲ್ಲಿ ಆರಂಭಗೊಂಡ ಪರಿಷ್ಕರಣೆ ಪ್ರಕ್ರಿಯೆಯ ಬಳಿಕ ಅನರ್ಹರ ಪಟ್ಟಿಯನ್ನು ಅಂತಿಮಗೊಳಿಸಿ ಯೋಜನೆಯಿಂದ ಹೊರಗಿಡಲಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿ ಹೆಚ್ಚು 47,871 ಅನರ್ಹ ಫಲಾನುಭವಿಗಳು ಪತ್ತೆಯಾಗಿದ್ದಾರೆ.
ಯೋಜನೆಯ ಸೌಲಭ್ಯ ನಿಜವಾದ ಅರ್ಹ ಮಹಿಳೆಯರಿಗೆ ತಲುಪುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿಯೂ ದತ್ತಾಂಶ ಪರಿಶೀಲನೆ ಮುಂದುವರಿಸಿ ಅನರ್ಹರನ್ನು ಗುರುತಿಸುವ ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



