Tuesday, June 16, 2026
Google search engine

Homeರಾಜ್ಯಸುದ್ದಿಜಾಲದೌರ್ಜನ್ಯಕ್ಕೊಳಗಾದ ಸಂತ್ರಸ್ತರಿಗೆ ಪರಿಹಾರ ನೀಡಲು ಅಗತ್ಯ ಕ್ರಮವಹಿಸಬೇಕು- ಡಾ ಕುಮಾರ

ದೌರ್ಜನ್ಯಕ್ಕೊಳಗಾದ ಸಂತ್ರಸ್ತರಿಗೆ ಪರಿಹಾರ ನೀಡಲು ಅಗತ್ಯ ಕ್ರಮವಹಿಸಬೇಕು- ಡಾ ಕುಮಾರ

ಮಂಡ್ಯ: ಇಂದು  ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳಾದ ಡಾ ಕುಮಾರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ (ದೌರ್ಜನ್ಯ ಪ್ರತಿಬಂಧಕ) ಕಾಯ್ದೆಯಡಿ ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು, ಪರಿಹಾರ ವಿತರಣೆ ಮತ್ತು ಸಾಮಾಜಿಕ ಭದ್ರತೆ ಪರಿಶೀಲನೆ ಸಂಬಂಧ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ದಲಿತರ ದೌರ್ಜನ್ಯ ನಡೆಯದಂತೆ ಎಲ್ಲ ತಾಲೂಕು ಆಡಳಿತಗಳಿಗೆ ಈಗಾಗಲೇ ಆದೇಶಿಸಿದ್ದು, ಎಲ್ಲ ವರ್ಗದವರೂ ಸಮಾನತೆಯಿಂದ ಸಹಬಾಳ್ವೆ ನಡೆಸುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆದೇಶ ಉಲ್ಲಂಘಿಸಿ, ದಲಿತರ ಶೋಷಣೆ ನಡೆದಿರುವುದು ಗಮನಕ್ಕೆ ಬಂದರೆ ತಕ್ಷಣವೇ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜನವರಿ 2026 ರಿಂದ ಜೂನ್ ವರೆಗೆ 43 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು ದೌರ್ಜನ್ಯ ಪ್ರಕರಣಗಳು ನಡೆದ ತಕ್ಷಣವೇ ಎಫ್‌.ಐ.ಆರ್ ದಾಖಲಿಸಿಕೊಳ್ಳುವುದು ಹಾಗೂ ದೌರ್ಜನ್ಯಕ್ಕೊಳಗಾದವರಿಗೆ ತ್ವರಿತ ನ್ಯಾಯ ಒದಗಿಸಲು ಅಗತ್ಯ ಕ್ರಮವಹಿಸಬೇಕು ಎಂದು ಅವರು ತಿಳಿಸಿದರು.

ದೇವಸ್ಥಾನಗಳಲ್ಲಿ ದಲಿತರ ಪ್ರವೇಶ ನಿರಾಕರಣೆಯು ಕಾನೂನುಬಾಹಿರ ಮತ್ತು ಅಮಾನವೀಯ. ದೇವಸ್ಥಾನ ಪ್ರವೇಶದ ಕುರಿತು ಸಮಾಜದಲ್ಲಿ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಹಾಗೂ ಸಾರ್ವಜನಿಕರಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ದೌರ್ಜನ್ಯ ಪ್ರತಿಬಂಧಕ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಭೆಗಳನ್ನು ನಿಯಮಿತವಾಗಿ ಪೊಲೀಸ್ ಇಲಾಖೆಯಲ್ಲಿಯೂ ನಡೆಸುವುದರಿಂದ ದೌರ್ಜನ್ಯ ಪ್ರಕರಣಗಳಿಗೆ ಬೇಗನೆ ನ್ಯಾಯ ಸಿಗಲು ಮತ್ತು ಸಮಾಜದಲ್ಲಿ ಶಾಂತಿ ಕಾಪಾಡಲು ಸಹಾಯವಾಗುತ್ತದೆ ಎಂದು ಸಭೆಯಲ್ಲಿ ಜಾಗೃತ ಸಮಿತಿ ಸದಸ್ಯರಾದ ಸೋಮಶೇಖರ್ ಕೆರೆಗೋಡು ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಶೋಭಾರಾಣಿ, ಉಪವಿಭಾಗಾಧಿಕಾರಿ ಶಿವಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್ ಸೇರಿದಂತೆ  ಜಾಗೃತ ಸಮಿತಿ ಸದಸ್ಯರಾದ ಆನಂದ್, ಸೋಮಶೇಖರ್ ಕೆರೆಗೋಡು, ಟಿ. ಸಿ. ಗುರಪ್ಪ, ಕೆ. ನರಸಿಂಹಮೂರ್ತಿ, ಸಿ. ಮಾಧು, ಬಿ. ಟಿ. ವಿಶ್ವನಾಥ್ ಹಾಗೂ ನಾಗರತ್ನ ಅವರು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular