Thursday, June 25, 2026
Google search engine

Homeಅಪರಾಧಜವನಗಹಳ್ಳಿಯಲ್ಲಿ ಅರೆಬೆಂದ ಯುವತಿಯ ಶವ ಪತ್ತೆ ಶವ ಸುಟ್ಟು ಸಾಕ್ಷ್ಯ ನಾಶ ಯತ್ನ

ಜವನಗಹಳ್ಳಿಯಲ್ಲಿ ಅರೆಬೆಂದ ಯುವತಿಯ ಶವ ಪತ್ತೆ ಶವ ಸುಟ್ಟು ಸಾಕ್ಷ್ಯ ನಾಶ ಯತ್ನ

ಮಂಡ್ಯ : ದುಷ್ಕರ್ಮಿಗಳು ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಶವವನ್ನು ಸುಟ್ಟು ಪರಾರಿಯಾಗಿರುವ ಆಘಾತಕಾರಿ ಘಟನೆ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಜವನಗಹಳ್ಳಿಯಲ್ಲಿ ನಡೆದಿದೆ.

ಮಳವಳ್ಳಿ-ಕೊಳ್ಳೇಗಾಲ ರಾಜ್ಯ ಹೆದ್ದಾರಿ ಪಕ್ಕದ ಜವನಗಹಳ್ಳಿ ಗುಡ್ಡದ ನಿರ್ಜನ ಪ್ರದೇಶದಲ್ಲಿ ನಿನ್ನೆ ರಾತ್ರಿ 8.30ರ ಸುಮಾರಿಗೆ ಅರೆಬೆಂದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಈ ಮಾರ್ಗದಲ್ಲಿ ಹೋಗುತ್ತಿದ್ದ ಲಾರಿ ಚಾಲಕ ಮೂತ್ರ ವಿಸರ್ಜನೆಗೆಂದು ಹೆದ್ದಾರಿ ಬದಿ ವಾಹನ ನಿಲ್ಲಿಸಿ ವಾಪಸ್‌‍ ಬರುವಾಗ ಗುಡ್ಡದ ಬಳಿ ಹೊಗೆ ಮತ್ತು ದುರ್ವಾಸನೆ ಬರುತ್ತಿದ್ದುದನ್ನು ಗಮನಿಸಿ ಕುತೂಹಲದಿಂದ ಹತ್ತಿರ ಹೋಗಿ ನೋಡಿದಾಗ ಅರೆಬೆಂದ ಸ್ಥಿತಿಯಲ್ಲಿ ಯುವತಿಯ ಶವ ಕಂಡು ಗಾಬರಿಗೊಂಡಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ಸುಮಾರು 18 ವರ್ಷ ವಯಸ್ಸಿನ ಅಸುಪಾಸಿನ ಯುವತಿಯಂತೆ ಕಂಡು ಬಂದಿದ್ದು, ಹೆಸರು, ವಿಳಾಸ ಸೇರಿದಂತೆ ಯಾವುದೇ ಗುರುತು ಸದ್ಯಕ್ಕೆ ಪತ್ತೆಯಾಗಿಲ್ಲ. ದೇಹ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಗುರುತು ಸಿಗದಂತಾಗಿದೆ.

ದುಷ್ಕರ್ಮಿಗಳು ಎರಡು ದಿನಗಳ ಹಿಂದೆಯೇ ಯುವತಿಯನ್ನು ಬೇರೆಡೆ ಕೊಲೆ ಮಾಡಿ, ಶವವನ್ನು ವಾಹನದಲ್ಲಿ ತಂದು ಈ ನಿರ್ಜನ ಪ್ರದೇಶದಲ್ಲಿ ಎಸೆದು ಪೆಟ್ರೋಲ್‌ ಅಥವಾ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಬೆಳಕವಾಡಿ ಪಿಎಸ್‌‍ಐ ಪ್ರಕಾಶ್‌ ಅವರು ಸಿಬ್ಬಂದಿ ಸಮೇತ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಡಾ. ವಿ.ಜೆ. ಶೋಭಾರಾಣಿ, ಮಳವಳ್ಳಿ ಡಿವೈಎಸ್‌‍ಪಿ ಯಶವಂತ್‌ ಕುಮಾರ್‌, ವತ್ತ ನಿರೀಕ್ಷಕ ಬಿ.ಎಸ್‌‍. ಶ್ರೀಧರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಬೆಳಕವಾಡಿ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ತೀವ್ರಗೊಂಡಿದೆ.

RELATED ARTICLES
- Advertisment -
Google search engine

Most Popular