ಲಕ್ನೋ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರಕ್ಕೆ ಭಕ್ತರು ನೀಡಿದ ದೇಣಿಗೆ ಮತ್ತು ಕಾಣಿಕೆಗಳ ದುರ್ಬಳಕೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಎಲ್ಲಾ ಎಂಟು ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಹಿಂದೆ ನೀಡಲಾಗಿದ್ದ ಮೂರು ದಿನಗಳ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಆರೋಪಿಗಳನ್ನು ಭ್ರಷ್ಟಾಚಾರ ತಡೆ ಕಾಯ್ದೆಯ ವಿಶೇಷ ನ್ಯಾಯಾಧೀಶ ರಜತ್ ವರ್ಮಾ ಅವರ ಮುಂದೆ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಾಜರುಪಡಿಸಲಾಯಿತು. ನ್ಯಾಯಾಲಯವು ಅವರನ್ನು ಜುಲೈ ಮಧ್ಯಭಾಗದವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸಲು ಆದೇಶಿಸಿದೆ.
ಪ್ರಕರಣದಲ್ಲಿ ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಅವಿನಾಶ್ ಶುಕ್ಲಾ, ತಿನ್ನು ಯಾದವ್, ಮನೀಶ್ ಯಾದವ್ ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿದೆ. ತನಿಖೆ ವೇಳೆ ಆರೋಪಿಗಳಿಂದ ಸುಮಾರು ₹79.85 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದ್ದು, ಮುಖ್ಯ ಆರೋಪಿಯಾಗಿರುವ ಅನುಕಲ್ಪ್ ಮಿಶ್ರಾ ನಿವಾಸದಿಂದಲೇ ₹20 ಲಕ್ಷ ಪತ್ತೆಯಾಗಿದೆ.
ವಿಶೇಷ ತನಿಖಾ ತಂಡ (SIT) ಪರಿಶೀಲಿಸಿದ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, 39 ದಿನಗಳಲ್ಲಿ ಸುಮಾರು 70 ಬಾರಿ ದೇಣಿಗೆ ಹಣವನ್ನು ಕಳವು ಮಾಡಿ ಮಂದಿರದ ಶೌಚಾಲಯಗಳಲ್ಲಿ ಅಡಗಿಸಿಟ್ಟು ಬಳಿಕ ರಾತ್ರಿ ವೇಳೆ ಹೊರ ಸಾಗಿಸಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನಷ್ಟು ಆರೋಪಿಗಳ ಪಾತ್ರವೂ ಪರಿಶೀಲನೆಯಲ್ಲಿದೆ.



