ಚೆನ್ನೈ: ತಮಿಳುನಾಡಿನಲ್ಲಿ ಟಿವಿಕೆ (TVK) ಮುಖ್ಯಸ್ಥ ಸಿಎಂ ಜೋಸೆಫ್ ವಿಜಯ್ ಅವರು ಸರ್ಕಾರ ರಚಿಸಿ ಇನ್ನು ಎರಡು ತಿಂಗಳು ಕೂಡ ಪೂರ್ಣಗೊಂಡಿಲ್ಲ, ಆದರೆ ಅದಾಗಲೇ ಅಲ್ಲಿ ರಾಜಕೀಯ ಏರುಪೇರುಗಳು ಆರಂಭವಾಗಿವೆ. ಕುದುರೆ ವ್ಯಾಪಾರಕ್ಕೆ (ಹಾರ್ಸ್ ಟ್ರೇಡಿಂಗ್) ಸಂಬಂಧಿಸಿದಂತೆ ಟಿವಿಕೆ ಮತ್ತು ಡಿಎಂಕೆ ನಡುವೆ ತೀವ್ರ ವಾಕ್ಸಮರ ನಡೆದಿರುವುದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಬುಧವಾರ (ಜೂನ್ 1) ಎರಡೂ ಪಕ್ಷಗಳು ಶಾಸಕರ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿವೆ ಎಂದು ಪರಸ್ಪರ ಗಂಭೀರ ಆರೋಪ ಮಾಡಿಕೊಂಡಿವೆ. ಇದೇ ವಿಷಯವಾಗಿ ಬಿಜೆಪಿ ಕೂಡ ವಿಜಯ್ ದಳಪತಿ ಅವರ ಪಕ್ಷದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದೆ.
ಮೂವರ ಬಂಧನ
ಸರ್ಕಾರದ ಶಾಸಕರು ಪಕ್ಷ ತೊರೆಯುವಂತೆ ಪ್ರಚೋದಿಸಿದ ಆರೋಪದ ಮೇಲೆ ಚೆನ್ನೈ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಒಬ್ಬ ಯೂಟ್ಯೂಬರ್ ಮತ್ತು ಕರೂರ್ ಜಿಲ್ಲೆಯ ಇಬ್ಬರು ಡಿಎಂಕೆ ಪದಾಧಿಕಾರಿಗಳು ಸೇರಿದ್ದಾರೆ. ಈ ಬಂಧನದ ನಂತರ ರಾಜಕೀಯ ವಿವಾದ ಮತ್ತಷ್ಟು ಕಾವೇರಿದೆ. ಕೃಷ್ಣಗಿರಿ ಜಿಲ್ಲೆಯ ಉತ್ತಂಗರೈ ವಿಧಾನಸಭಾ ಕ್ಷೇತ್ರದ ಟಿವಿಕೆ ಶಾಸಕ ಎನ್. ಇಳಯರಾಜ ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಾಗಿದೆ.
ಟಿವಿಕೆ ತೊರೆಯುವಂತೆ ಒತ್ತಡ ಹೇರಿದ ಆರೋಪ
ಆಡಳಿತಾರೂಢ ಟಿವಿಕೆ ಪಕ್ಷವನ್ನು ತೊರೆಯುವಂತೆ ತಮಗೆ ಪದೇ ಪದೇ ಆಮಿಷ ಒಡ್ಡಲಾಗಿತ್ತು ಎಂದು ಶಾಸಕ ಇಳಯರಾಜ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಯೂಟ್ಯೂಬರ್ ಐ.ಪಿ.ಡಿ.ಎಸ್. ತಿರುನಾವುಕ್ಕರಸು ಎಂಬಾತ ತನ್ನನ್ನು ಹಲವು ಬಾರಿ ಸಂಪರ್ಕಿಸಿ, ಮಾತುಕತೆ ನಡೆಸಿ, ಬೆಂಬಲ ನೀಡುವಂತೆ ತಮಗೆ ಬೆದರಿಕೆ ಹಾಕಿದ್ದಾಗಿ ಅವರು ದೂರಿದ್ದಾರೆ. ಈ ದೂರಿನ ಆಧಾರದ ಮೇಲೆ ಚೆನ್ನೈನ ಟ್ರಿಪ್ಲಿಕೇನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಿರುನಾವುಕ್ಕರಸು ಎಂಬಾತನನ್ನು ಬಂಧಿಸಿದ್ದಾರೆ.
ಸರ್ಕಾರವನ್ನು ಅಸ್ಥಿರಗೊಳಿಸಲು ಸಂಚು : ಸಚಿವ ನಿರ್ಮಲ್ ಕುಮಾರ್
ಟಿವಿಕೆ ಶಾಸಕರಿಗೆ ಆಮಿಷ ಒಡ್ಡಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಲಾಗುತ್ತಿದೆ ಎಂದು ಸಚಿವ ನಿರ್ಮಲ್ ಕುಮಾರ್ ಆರೋಪಿಸಿದ ಮರುದಿನವೇ ಈ ಬಂಧನ ನಡೆದಿದೆ. ಟಿವಿಕೆಯ ಮೂವರು ಶಾಸಕರನ್ನು ಗುರಿಯಾಗಿಸಿಕೊಂಡು, ಪಕ್ಷಾಂತರ ಮಾಡಲು ತಲಾ 15 ಕೋಟಿ ರೂಪಾಯಿ ಆಫರ್ ನೀಡಲಾಗಿತ್ತು ಎಂಬ ಆರೋಪದ ಬಗ್ಗೆ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಮಾಜಿ ಸಚಿವ ಸೆಂಥಿಲ್ ಬಾಲಾಜಿ ಅವರ ಆಪ್ತರೆನ್ನಲಾದ ಇಬ್ಬರು ಡಿಎಂಕೆ ಪದಾಧಿಕಾರಿಗಳ ಬಂಧನದ ನಂತರ ಈ ಪ್ರಕರಣ ಇಡೀ ತಮಿಳುನಾಡು ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಸಂಚಿನಲ್ಲಿ ಭಾಗಿಯಾಗಿರುವ ಇತರರನ್ನು ಗುರುತಿಸಲು ಮುಂದಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸಿಸ್)



