Thursday, July 2, 2026
Google search engine

Homeದೇಶಮಹಾಬಲಿಪುರಂನಲ್ಲಿ ಎಐಎಡಿಎಂಕೆ ಮಾಜಿ ಶಾಸಕರು ಮತ್ತು ಪ್ರಮುಖ ನಾಯಕರು ಟಿವಿಕೆ ಸೇರ್ಪಡೆ!

ಮಹಾಬಲಿಪುರಂನಲ್ಲಿ ಎಐಎಡಿಎಂಕೆ ಮಾಜಿ ಶಾಸಕರು ಮತ್ತು ಪ್ರಮುಖ ನಾಯಕರು ಟಿವಿಕೆ ಸೇರ್ಪಡೆ!

ಮಹಾಬಲಿಪುರಂ (ತಮಿಳುನಾಡು) : ತಮಿಳುನಾಡಿನ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸುವ ಬೆಳವಣಿಗೆಯೊಂದು ನಡೆದಿದೆ. ಎಐಎಡಿಎಂಕೆ (AIADMK) ಪಕ್ಷದಿಂದ ಇತ್ತೀಚೆಗೆ ರಾಜೀನಾಮೆ ನೀಡಿದ್ದ ಹಲವು ಮಾಜಿ ಸಚಿವರು, ಶಾಸಕರು ಮತ್ತು ಪಕ್ಷದ ಪ್ರಮುಖ ಕಾರ್ಯಕರ್ತರು ಅಧಿಕೃತವಾಗಿ ತಮಿಳಗ ವೆಟ್ರಿ ಕಳಗಂ (TVK) ಸೇರ್ಪಡೆಯಾಗಿದ್ದಾರೆ.

ಮಹಾಬಲಿಪುರಂನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಟಿವಿಕೆ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಈ ಮೂಲಕ ರಾಜ್ಯದ ರಾಜಕೀಯ ಸಮೀಕರಣದಲ್ಲಿ ಮಹತ್ವದ ಬದಲಾವಣೆಯಾಗಿದೆ.

ಪಕ್ಷ ಸೇರಿದ ಪ್ರಮುಖ ನಾಯಕರು


ಈ ಕಾರ್ಯಕ್ರಮದಲ್ಲಿ ಎಐಎಡಿಎಂಕೆಯ ಘಟಾನುಘಟಿ ನಾಯಕರು ಟಿವಿಕೆ ಬಾವುಟ ಹಿಡಿದಿದ್ದಾರೆ. ಮಾಜಿ ಸಚಿವರಾದ ಸಿ. ವಿಜಯಭಾಸ್ಕರ್, ಎಂ.ಆರ್. ವಿಜಯಭಾಸ್ಕರ್, ಎಂ.ಎಸ್.ಎಂ. ಆನಂದನ್ ಮತ್ತು ವಲರ್ಮತಿ ಅವರು ಟಿವಿಕೆಗೆ ಸೇರ್ಪಡೆಯಾದ ಪ್ರಮುಖ ನಾಯಕರಾಗಿದ್ದಾರೆ.

ಜಿಲ್ಲಾ ಕಾರ್ಯದರ್ಶಿಗಳಾದ ವೈರಮುತ್ತು (ಪುದುಕೊಟ್ಟೈ), ಇಳಮೈ ತಮಿಳ್‌ಸೆಲ್ವನ್ (ಪೆರಂಬಲೂರು), ಶೇಖರ್ (ಒರತನಾಡು) ಮತ್ತು ತಿರುಚ್ಚಿರಾಪಳ್ಳಿ ಮಾಜಿ ಉಪಮೇಯರ್ ಶ್ರೀನಿವಾಸನ್ ಅವರು ಪಕ್ಷ ಸೇರಿದ್ದಾರೆ.

ಮಾಜಿ ಶಾಸಕರಾದ ಮನ್ರಾಜ್ (ಶ್ರೀವಿಲ್ಲಿಪುತ್ತೂರ್), ರಾಮ್‌ ಕುಮಾರ್ (ಕುಂಭಕೋಣಂ), ರಾಜವರ್ಮನ್ (ತಿರುಚ್ಚುಳಿ), ಸದನ್ ಪ್ರಭಾಕರ್ (ಪರಮಕುಡಿ), ತಿರುಜ್ಞಾನಸಂಬಂಧಂ (ಪೆರಾವೂರುಣಿ), ಸುಂದರರಾಜನ್ (ಸಂಕಗಿರಿ) ಮತ್ತು ರಾಮಚಂದ್ರನ್ (ಶಿವಗಂಗೆ) ಅವರು ಟಿವಿಕೆಗೆ ಬೆಂಬಲ ಸೂಚಿಸಿದ್ದಾರೆ.

“ನಮ್ಮ ನಾಯಕನೇ ಶಾಶ್ವತ ಸಿಎಂ”: ಸೆಂಗೆಟ್ಟಿಯಾನ್

ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿದ ತಮಿಳುನಾಡು ಸಚಿವ ಮತ್ತು ಮಾಜಿ ಎಐಎಡಿಎಂಕೆ ನಾಯಕ ಸೆಂಗೆಟ್ಟಿಯಾನ್, “ನಾನು ಪಕ್ಷದಿಂದ ಹೊರಹಾಕಲ್ಪಟ್ಟಾಗ, ಇಂದಿನ ನಮ್ಮ ನಾಯಕ ನನಗೆ ಸಚಿವ ಸ್ಥಾನ ನೀಡಿದರು. ದಾರಿ ಕಾಣದವರಿಗೆ ಅವರು ದಾರಿದೀಪವಾಗಿದ್ದಾರೆ. ಅವರು ಒಬ್ಬ ಶ್ರೇಷ್ಠ ನಾಯಕ. ಎಐಎಡಿಎಂಕೆ ತನ್ನ ಬದ್ಧ ವೈರಿಯಾದ ಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾದಾಗ ಕಾರ್ಯಕರ್ತರಿಗೆ ನೋವಾಗಿತ್ತು. ಅಲ್ಲಿ ದ್ರೋಹವಿದೆ, ಆದರೆ ಇಲ್ಲಿ ಉತ್ತಮ ನಾಯಕತ್ವವಿದೆ. ನಮ್ಮ ನಾಯಕನೇ ಶಾಶ್ವತ ಮುಖ್ಯಮಂತ್ರಿ,” ಎಂದು ಬಣ್ಣಿಸಿದರು.

ಕೆ. ಕನಿಮೊಳಿ ವ್ಯಂಗ್ಯ

ಈ ರಾಜಕೀಯ ಬೆಳವಣಿಗೆಯನ್ನು ಡಿಎಂಕೆ ಸಂಸದೆ ಕೆ. ಕನಿಮೊಳಿ ತೀವ್ರವಾಗಿ ಟೀಕಿಸಿದ್ದಾರೆ. ಎಕ್ಸ್ (ಟ್ವಿಟರ್) ತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ಉತ್ತರ ಭಾರತದಲ್ಲಿ ಬಿಜೆಪಿ ಬಳಸುತ್ತಿದ್ದ ‘ವಾಷಿಂಗ್ ಮೆಷಿನ್’ ತಂತ್ರ ಈಗ ತಮಿಳುನಾಡಿಗೂ ಬಂದಿದೆ ಎಂದು ಕೇಳಿದ್ದೇನೆ. ಈ ಹೊಸ ತಮಿಳುನಾಡು ಮಾಡೆಲ್ ಮೆಷಿನ್ ಗುಟ್ಕಾ ಕಲೆಗಳನ್ನು ಕೂಡ ತೊಳೆದು ಸ್ವಚ್ಛಗೊಳಿಸುತ್ತದೆಯೇ?” ಎಂದು ವ್ಯಂಗ್ಯವಾಡಿದ್ದಾರೆ.

ಟಿವಿಕೆಗೆ ಬಲ

2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಇತಿಹಾಸ ನಿರ್ಮಿಸಿರುವ ವಿಜಯ್ ನೇತೃತ್ವದ ಟಿವಿಕೆ, ಈಗ ಅನುಭವಿ ನಾಯಕರ ಸೇರ್ಪಡೆಯಿಂದ ತನ್ನ ಸಾಂಸ್ಥಿಕ ನೆಲೆಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ಮುಂದಾಗಿದೆ. ವಿಜಯ್ ಅವರು ಈಗಾಗಲೇ ತಮಿಳುನಾಡಿನ 13ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ರಾಜ್ಯ ರಾಜಕಾರಣದಲ್ಲಿ ಹೊಸ ಪರ್ವ ಆರಂಭವಾಗಿದೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular