ಬೆಂಗಳೂರು : ಮಾಗಡಿ ರಸ್ತೆ ಬಳಿ ಸಂಭವಿಸಿದ ಕಲ್ಲು ಕ್ವಾರಿ ದುರಂತದಲ್ಲಿ 7 ಮಂದಿ ಮೃತಪಟ್ಟಿರುವ ಪ್ರಕರಣದ ಬಗ್ಗೆ ಅಧಿಕೃತ ಮಾಹಿತಿ ಪಡೆದ ನಂತರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಈ ಕುರಿತು ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಅಧಿಕಾರಿಗಳು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ದುರಂತ ಸ್ಫೋಟದಿಂದ ಸಂಭವಿಸಿಲ್ಲ ಎಂಬ ಮಾಹಿತಿ ದೊರೆತಿದ್ದು, ಸಂಬಂಧಿತ ಕ್ವಾರಿ ಕಾನೂನುಬದ್ಧವಾಗಿ ನಡೆಸಲಾಗುತ್ತಿದೆಯೇ ಅಥವಾ ನಿಯಮ ಉಲ್ಲಂಘನೆಯಾಗಿದೆಯೇ ಎಂಬ ಕುರಿತು ವರದಿ ತರಿಸಿಕೊಂಡು ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಕ್ವಾರಿ ಕಾರ್ಯಾಚರಣೆಗೆ ಸಂಬಂಧಿಸಿದ ನಿಯಮಗಳ ಪಾಲನೆ ನಡೆಯುತ್ತಿದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತದೆ ಎಂದು ಸಿಎಂ ತಿಳಿಸಿದರು.
ಇದೇ ವೇಳೆ, ಹಿಂದೆ ನಡೆದ ಸ್ಫೋಟದ ವೇಳೆ ಚಿರತೆ ಮೃತಪಟ್ಟಿತ್ತು ಎಂಬ ಸ್ಥಳೀಯ ಶಾಸಕರ ಆರೋಪ ಹಾಗೂ ಪ್ರಕರಣವನ್ನು ಮುಚ್ಚಿಹಾಕಲಾಗಿದೆ ಎಂಬ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಶಾಸಕರು ನೀಡಿರುವ ಮಾಹಿತಿಯನ್ನು ಪರಿಶೀಲಿಸಿ ಅಧಿಕೃತ ವರದಿ ಬಂದ ನಂತರ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು.



