Thursday, July 2, 2026
Google search engine

Homeರಾಜಕೀಯಕಲಬುರಗಿಯಲ್ಲಿ ಬೃಹತ್ ಪಿಎಂ-ಮಿತ್ರ ಜವಳಿ ಪಾರ್ಕ್‌ಗೆ ಸಚಿವ ಸಂಪುಟ ಅನುಮೋದನೆ : ಖರ್ಗೆ

ಕಲಬುರಗಿಯಲ್ಲಿ ಬೃಹತ್ ಪಿಎಂ-ಮಿತ್ರ ಜವಳಿ ಪಾರ್ಕ್‌ಗೆ ಸಚಿವ ಸಂಪುಟ ಅನುಮೋದನೆ : ಖರ್ಗೆ

ಬೆಂಗಳೂರು : ರಾಜ್ಯದ ಕೈಗಾರಿಕಾ ಹಾಗೂ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ಮಹತ್ವದ ಹೆಜ್ಜೆಯಾಗಿ ಕಲಬುರಗಿ ಜಿಲ್ಲೆಯಲ್ಲಿ ಸ್ಥಾಪನೆಯಾಗುತ್ತಿರುವ ಪಿಎಂ-ಮಿತ್ರ ಬೃಹತ್ ಜವಳಿ ಪಾರ್ಕ್ ಅಭಿವೃದ್ಧಿಗೆ ಸಂಬಂಧಿಸಿದ ಮಹತ್ವದ ನಿರ್ಧಾರವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಪಿಎಂ-ಮಿತ್ರ ಯೋಜನೆಯಡಿ ಕಲಬುರಗಿಯಲ್ಲಿ 1000 ಎಕರೆ ಪ್ರದೇಶದಲ್ಲಿ ದೇಶದ ಅತಿದೊಡ್ಡ ಸಮಗ್ರ ಜವಳಿ ಉದ್ಯಾನವನ ಸ್ಥಾಪನೆಗೆ ಈಗಾಗಲೇ ಅನುಮೋದನೆ ದೊರೆತಿದ್ದು, ಈ ಯೋಜನೆಯನ್ನು ಇನ್ನಷ್ಟು ವೇಗವಾಗಿ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಇದುವರೆಗೆ ಪ್ರಸ್ತಾಪಿಸಲಾಗಿದ್ದ ಪಿಪಿಪಿ ಮಾದರಿಯನ್ನು ಬದಲಿಸಿ, ರಾಜ್ಯದ ಸಂಸ್ಥೆಯಾದ ಕೆಐಎಡಿಬಿ ಮೂಲಕ ನೇರವಾಗಿ ಅಭಿವೃದ್ಧಿಪಡಿಸುವ ಮಾದರಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದ್ದಾರೆ.

ಇನ್ನೂ ಒಟ್ಟು ₹1700 ಕೋಟಿ ಅಂದಾಜು ವೆಚ್ಚದ ಈ ಯೋಜನೆಯಲ್ಲಿ ಮೊದಲ ಹಂತದಲ್ಲಿ ಸುಮಾರು ₹320 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕೈಗೊಳ್ಳಲಾಗುತ್ತಿದ್ದು, ಇದರಲ್ಲಿ ಭೂ ಅಭಿವೃದ್ಧಿ, ರಸ್ತೆ ನಿರ್ಮಾಣ, ಒಳಚರಂಡಿ ಹಾಗೂ ಡ್ರೈನೇಜ್ ವ್ಯವಸ್ಥೆ, ವಿದ್ಯುತ್ ವಿತರಣಾ ಜಾಲ, ಬೀದಿ ದೀಪಗಳು, 2.5 ಎಂಎಲ್‌ಡಿ ಸಾಮರ್ಥ್ಯದ ಶುದ್ಧೀಕರಣ ಘಟಕ, ಪ್ಲಗ್ ಅಂಡ್ ಪ್ಲೇ ಕೈಗಾರಿಕಾ ಕಟ್ಟಡಗಳು ಹಾಗೂ ನೀರು ಸರಬರಾಜು ವ್ಯವಸ್ಥೆ ಸೇರಿವೆ ಎನ್ನಲಾಗಿದೆ.

ಈ ಯೋಜನೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕೀಕರಣಕ್ಕೆ ಹೊಸ ವೇಗ ಸಿಗಲಿದ್ದು, ಒಂದು ಲಕ್ಷಕ್ಕೂ ಹೆಚ್ಚು ನೇರ ಹಾಗೂ ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಜೊತೆಗೆ ಜವಳಿ ಮತ್ತು ಗಾರ್ಮೆಂಟ್ ಕ್ಷೇತ್ರಕ್ಕೆ ಜಾಗತಿಕ ಮಾರುಕಟ್ಟೆ ಅವಕಾಶಗಳು ವಿಸ್ತರಿಸಿ, ಹೂಡಿಕೆ ಆಕರ್ಷಣೆ ಮತ್ತು ರಫ್ತು ಸಾಮರ್ಥ್ಯವೂ ಹೆಚ್ಚಲಿದೆ. ಹಾಗೂ ಕಲಬುರಗಿ ಸೇರಿದಂತೆ ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಆದ್ಯತೆ ನೀಡುವ ಸರ್ಕಾರದ ಬದ್ಧತೆಯ ಭಾಗವಾಗಿ ಈ ಯೋಜನೆ ಜಾರಿಗೆ ಬರುತ್ತಿದ್ದು, ಇದು ರಾಜ್ಯದ ಕೈಗಾರಿಕಾ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular