ಮೈಸೂರು : ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಎಲ್ಲಾ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರುತ್ತಿದ್ದು, ಅದಕ್ಕೆ ತಕ್ಕಂತೆ ತರಬೇತಿ ಪಡೆಯುವುದು ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಜೆಎಸ್‌ಎಸ್ ಆಸ್ಪತ್ರೆಯ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಎಎಚ್‌ಇಆರ್‌ನಿಂದ ಆರಂಭಿಸಲಾದ ಇಡ್ಜ್, ಜಿಐಎಫ್‌ಟಿ ಹಾಗೂ ‘AI in Health Care’ ಕೋರ್ಸ್‌ಗಳಿಗೆ ಚಾಲನೆ ನೀಡಿ ಮಾತನಾಡಿದರು. ಜೊತೆಗೆ ವಿಶ್ವ ವೈದ್ಯರ ದಿನಾಚರಣೆಯನ್ನೂ ಉದ್ಘಾಟಿಸಿದರು.
ಈ ವೇಳೆ ಆರೋಗ್ಯ ಕ್ಷೇತ್ರದಲ್ಲೂ ಎಐ ತಂತ್ರಜ್ಞಾನ ದೊಡ್ಡ ಮಟ್ಟದ ಬದಲಾವಣೆ ತರಲಿದ್ದು, ವೈದ್ಯರು, ನರ್ಸ್‌ಗಳು ಹಾಗೂ ಆರೋಗ್ಯ ಸಿಬ್ಬಂದಿ ಈ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲು ತರಬೇತಿ ಅಗತ್ಯವಾಗಿದೆ ಎಂದು ಅವರು ಒತ್ತಿಹೇಳಿದರು. ಜೆಎಸ್‌ಎಸ್ ಸಂಸ್ಥೆ ‘AI in Indian Health Care’ ಎಂಬ ಪ್ರಮಾಣಪತ್ರ ಕೋರ್ಸ್ ಆರಂಭಿಸಿರುವುದು ಶ್ಲಾಘನೀಯವಾಗಿದ್ದು, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿಯೂ ಇಂತಹ ಕೋರ್ಸ್‌ಗಳನ್ನು ಆರಂಭಿಸಬೇಕೆಂದು ಸಚಿವರು ಸಲಹೆ ನೀಡಿದರು.
ಇನ್ನೂ ಬದಲಾವಣೆಗಳಿಗೆ ಹೊಂದಿಕೊಳ್ಳುವ ಸಂಸ್ಥೆಗಳೇ ಯಶಸ್ಸು ಕಾಣುತ್ತವೆ ಎಂಬುದನ್ನು ಜೆಎಸ್‌ಎಸ್ ಸಂಸ್ಥೆ ತೋರಿಸುತ್ತಿದೆ ಎಂದು ಪ್ರಶಂಸಿಸಿದ ಅವರು, ಆರೋಗ್ಯವಂತ ಸಮಾಜವೇ ಅಭಿವೃದ್ಧಿಶೀಲ ಸಮಾಜವಾಗುತ್ತದೆ ಎಂದರು.
ಬಳಿಕ ನೀತಿ ಆಯೋಗದ ಸದಸ್ಯ ಡಾ. ಆರ್.ಬಾಲಸುಬ್ರಮಣ್ಯಂ ಮಾತನಾಡಿ, ಎಐ ಹಲವು ಕ್ಷೇತ್ರಗಳಲ್ಲಿ ಉದ್ಯೋಗ ಹಾಗೂ ಕಾರ್ಯವಿಧಾನಗಳಲ್ಲಿ ಬದಲಾವಣೆ ತರಲಿದೆ. ಇದನ್ನು ಸಮಸ್ಯೆಯಾಗಿ ಅಲ್ಲ, ಅವಕಾಶವಾಗಿ ಪರಿವರ್ತಿಸಬೇಕು ಎಂದು ಹೇಳಿದರು.
ಅವರು ಮುಂದುವರಿದು, ಎಐ ಕಾರಣದಿಂದ ಉದ್ಯೋಗ ನಷ್ಟದ ಸಾಧ್ಯತೆಗಳಿದ್ದು, ಹೊಸ ಕೌಶಲ್ಯಗಳನ್ನು ಕಲಿಸುವುದು ಹಾಗೂ ಉದ್ಯೋಗಿಗಳಿಗೆ ಮರುತರಬೇತಿ ನೀಡುವುದು ಪ್ರಮುಖ ಸವಾಲಾಗಲಿದೆ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಕಾರ್ಯಕ್ರಮದಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ವಿವಿಧ ವೈದ್ಯರನ್ನು ಸನ್ಮಾನಿಸಲಾಯಿತು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಟಿ.ಎಸ್.ಶ್ರೀವತ್ಸ ಅಧ್ಯಕ್ಷತೆ ವಹಿಸಿದ್ದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜೆ.ಬೆಟಸೂರ ಮಠ, ಜೆಎಸ್‌ಎಸ್-ಎಎಚ್‌ಇಆರ್‌ನ ಕುಲಪತಿ ಡಾ.ಎಚ್.ಬಸವನಗೌಡಪ್ಪ, ಸಮಕುಲಾಧಿಪತಿ ಡಾ.ಬಿ.ಸುರೇಶ್, ಜೆಎಸ್‌ಎಸ್ ಆಸ್ಪತ್ರೆ ನಿರ್ದೇಶಕ ಡಾ.ಸಿ.ಪಿ.ಮಧು, ಜೆಎಸ್‌ಎಸ್ ಮೆಡಿಕಲ್ ಕಾಲೇಜು ಉಪ ಪ್ರಾಂಶುಪಾಲ ಡಾ.ವಿಕ್ರಮ್ ಪಾಟೀಲ್ ಇತರರು ಇದ್ದರು.



