ಮಂಡ್ಯ : ಕಳೆದ ಆರು ತಿಂಗಳಿಂದ ಮಳೆ ಇಲ್ಲದೆ ಭೀಕರ ಬರಗಾಲ ಮತ್ತು ನೀರಿನ ಅಭಾವದಿಂದ ಕಂಗಾಲಾಗಿದ್ದ ಮಂಡ್ಯ ಹಾಗೂ ಮೈಸೂರು ಭಾಗದ ರೈತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು, ಶ್ರೀರಂಗಪಟ್ಟಣ ತಾಲೂಕಿನ ಕನ್ನಂಬಾಡಿಯ ಕೃಷ್ಣರಾಜ ಸಾಗರ (ಕೆಆರ್ಎಸ್) ಜಲಾಶಯಕ್ಕೆ ಹೊಸ ಜೀವಕಳೆ ಬಂದಿದೆ.
ಒಳಹರಿವಿನಲ್ಲಿ ಭಾರೀ ಏರಿಕೆ
ಕೊಡಗು ಸೇರಿದಂತೆ ಕಾವೇರಿ ಕಣಿವೆಯ ಮೇಲ್ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ, ಕೆಆರ್ಎಸ್ ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ನಿನ್ನೆ 1,449 ಕ್ಯೂಸೆಕ್ ಇದ್ದ ಒಳಹರಿವು, ಇಂದು ಒಂದೇ ದಿನದಲ್ಲಿ 4,291 ಕ್ಯೂಸೆಕ್ಗೆ ಜಿಗಿದಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ದಾಖಲಾಗಿರುವ ಅತಿ ಹೆಚ್ಚಿನ ಒಳಹರಿವು ಇದಾಗಿದ್ದು, ಜಲಾಶಯದ ಮಟ್ಟ ಏರಿಕೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಜಲಾಶಯದ ಇಂದಿನ ಸ್ಥಿತಿಗತಿ
ಗರಿಷ್ಠ ಮಟ್ಟ: 124.80 ಅಡಿ
ಪ್ರಸ್ತುತ ಮಟ್ಟ: 80.90 ಅಡಿ
ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
ಪ್ರಸ್ತುತ ಸಂಗ್ರಹ: 11.487 ಟಿಎಂಸಿ
ಇಂದಿನ ಒಳಹರಿವು: 4,291 ಕ್ಯೂಸೆಕ್
ಇಂದಿನ ಹೊರಹರಿವು: 764 ಕ್ಯೂಸೆಕ್
ರೈತರ ಮುಖದಲ್ಲಿ ಮಂದಹಾಸ
ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿಗೂ ಪರದಾಡುತ್ತಿದ್ದ ರೈತರಲ್ಲಿ ಈ ಮಳೆ ಹೊಸ ಆಶಾಭಾವನೆ ಮೂಡಿಸಿದೆ. ಮುಂಗಾರು ಮಳೆ ಇದೇ ರೀತಿ ಮುಂದುವರಿದರೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂಬ ನಂಬಿಕೆ ರೈತರದ್ದಾಗಿದೆ. ಜಲಾಶಯದ ನೀರಿನ ಮಟ್ಟ ಹೆಚ್ಚಳದಿಂದ ಕುಡಿಯುವ ನೀರಿನ ಸಮಸ್ಯೆ ತಗ್ಗಲಿದೆ ಎಂಬ ನಿರೀಕ್ಷೆಯನ್ನೂ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಹವಾಮಾನ ಇಲಾಖೆಯ ಮುನ್ಸೂಚನೆ
ಹವಾಮಾನ ಇಲಾಖೆಯು ಕೊಡಗು ಸೇರಿದಂತೆ ಕಾವೇರಿ ಹರಿವಿನ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಮಳೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಇದರಿಂದ ಕೆಆರ್ಎಸ್ ಜಲಾಶಯಕ್ಕೆ ಹರಿದುಬರುವ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದ್ದು, ಜಲಾಶಯದ ಒಡಲು ತುಂಬಿ ರೈತರ ಬಾಳು ಹಸನಾಗಲಿ ಎಂದು ಮಂಡ್ಯದ ರೈತ ಸಮುದಾಯ ಪ್ರಾರ್ಥಿಸುತ್ತಿದೆ.



