ಬೆಂಗಳೂರು : ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರೀ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ನಾಯಕರು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ನಡೆದ ಈ ಭೇಟಿಯಲ್ಲಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ, ಶಾಸಕ ಡಾ. ಅಶ್ವತ್ಥ್ ನಾರಾಯಣ ಮತ್ತು ಎಂಎಲ್ಸಿ ಸಿ.ಟಿ. ರವಿ ಸೇರಿದಂತೆ ಮೈತ್ರಿಕೂಟದ ಪ್ರಮುಖ ನಾಯಕರು ಪಾಲ್ಗೊಂಡಿದ್ದರು.
ಪ್ರಮುಖ ಆರೋಪಗಳೇನು?
ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯ ಸರ್ಕಾರದ ಬೆಂಬಲದೊಂದಿಗೆ ಎಸ್ಐಆರ್ ಪ್ರಕ್ರಿಯೆಯಲ್ಲಿ ವ್ಯವಸ್ಥಿತ ಅಕ್ರಮಗಳು ನಡೆಯುತ್ತಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ನಿರ್ದಿಷ್ಟ ಸಮುದಾಯದ (ಮುಸ್ಲಿಮರು) ನಾಯಕರ ಮೂಲಕ ಓಣಿ ಮತ್ತು ಬೂತ್ ಮಟ್ಟದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕೆಲಸವನ್ನು ನಡೆಸಲಾಗುತ್ತಿದೆ. ವಾಟ್ಸಾಪ್ ಗ್ರೂಪ್ಗಳನ್ನು ರಚಿಸಿಕೊಂಡು, ಸಂತೆ ನಡೆಯುವ ಪ್ರದೇಶಗಳು, ಮದರಸಾಗಳು, ಮಸೀದಿಗಳು ಮತ್ತು ಕಾಂಗ್ರೆಸ್ನ ಮಾಜಿ ಪ್ರತಿನಿಧಿಗಳ ಮನೆಗಳಲ್ಲಿ ಈ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಬೂತ್ ಮಟ್ಟದ ಅಧಿಕಾರಿಗಳು (BLO) ನಿಯಮಬದ್ಧವಾಗಿ ಮಾಹಿತಿ ನೀಡದೆ, ಏಕಪಕ್ಷೀಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಪಕ್ಷಗಳ ಆಗ್ರಹ
ಈ ಅಕ್ರಮಗಳ ಕುರಿತಾದ ಸಾಕ್ಷ್ಯಗಳನ್ನು ಒಳಗೊಂಡ ಪೆನ್ಡ್ರೈವ್ ಅನ್ನು ಚುನಾವಣಾ ಆಯೋಗಕ್ಕೆ ಹಸ್ತಾಂತರಿಸಿರುವ ಮೈತ್ರಿಕೂಟದ ನಾಯಕರು, ಪ್ರಸ್ತುತ ನಡೆಯುತ್ತಿರುವ ದೋಷಪೂರಿತ ಎಸ್ಐಆರ್ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ಆಯೋಗವು ಸೂಕ್ತ ತನಿಖೆ ನಡೆಸಿ, ಲೋಪದೋಷಗಳನ್ನು ಸರಿಪಡಿಸಬೇಕು. ಪಾರದರ್ಶಕತೆಯನ್ನು ಖಚಿತಪಡಿಸಿದ ನಂತರವೇ ಮತ್ತೆ ಹೊಸದಾಗಿ ಪ್ರಕ್ರಿಯೆಯನ್ನು ಆರಂಭಿಸಬೇಕು. ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ನಡೆಯುತ್ತಿರುವ ಈ ಪ್ರಕ್ರಿಯೆಯು ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ ಎಂದು ವಿಪಕ್ಷ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ. (ಏಜೆನ್ಸಿಸ್)



