ಮೈಸೂರು: 2026ನೇ ಸಾಲಿನ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮತ್ತಿಗೋಡು, ದುಬಾರೆ ಹಾಗೂ ರಾಮಪುರ ಆನೆ ಶಿಬಿರಗಳಲ್ಲಿರುವ 20ಕ್ಕೂ ಹೆಚ್ಚು ಆನೆಗಳ ಆರೋಗ್ಯ ತಪಾಸಣೆಯನ್ನು ಪಶುವೈದ್ಯಾಧಿಕಾರಿಗಳ ತಂಡ ಆರಂಭಿಸಿದೆ.
ಆನೆಗಳ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದ ಬಳಿಕ ರಕ್ತ ಹಾಗೂ ಮಲದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಹೆಣ್ಣಾನೆಗಳ ಗರ್ಭಧಾರಣೆ ಪರೀಕ್ಷೆಯನ್ನು ಅಲ್ಟ್ರಾಸೌಂಡ್ ಮೂಲಕ ನಡೆಸಲಾಗುತ್ತಿದ್ದು, ಈ ಬಾರಿ ಮೊದಲ ಬಾರಿಗೆ ಆನೆಗಳ ಹೃದಯ ಆರೋಗ್ಯ ಪರೀಕ್ಷೆಗೆ ಇಸಿಜಿ (ECG) ಪರೀಕ್ಷೆಯನ್ನೂ ಕೈಗೊಳ್ಳಲಾಗುತ್ತಿದೆ.
ಪ್ರಯೋಗಾಲಯದ ವರದಿಗಳ ಬಳಿಕ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದ ತಂಡ ವಿವಿಧ ಶಿಬಿರಗಳಿಗೆ ಭೇಟಿ ನೀಡಿ ದಸರಾ ಆನೆಗಳ ಆಯ್ಕೆ ಪ್ರಕ್ರಿಯೆ ಆರಂಭಿಸಲಿದೆ. ವಿಜಯದಶಮಿ ಜಂಬೂಸವಾರಿ ಕಳೆದ ವರ್ಷಕ್ಕಿಂತ ಸುಮಾರು 20 ದಿನ ತಡವಾಗಿ ನಡೆಯಲಿರುವುದರಿಂದ, ಆನೆಗಳ ಆಯ್ಕೆ ಪ್ರಕ್ರಿಯೆಯೂ ತಡವಾಗಿ ಆರಂಭವಾಗಲಿದೆ ಎಂದು ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭುಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



