ವಯನಾಡ್ : ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿ ಸಂಭವಿಸಿದ ಭೀಕರ ಭೂಕುಸಿತ ಇಡೀ ರಾಜ್ಯವನ್ನೇ ನಡುಗಿಸಿದೆ. ವಯನಾಡ್ ಸುರಂಗ ರಸ್ತೆ (Wayanad Tunnel Project) ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಪ್ರದೇಶದಲ್ಲಿ ಭಾರೀ ಪ್ರಮಾಣದ ಮಣ್ಣು ಕುಸಿದು ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಜೀವಂತ ಸಮಾಧಿಯಾಗಿದ್ದಾರೆ. ಇನ್ನು 30ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ಲಭ್ಯವಾಗಿದ್ದು, ಇವರಲ್ಲಿ ಕನಿಷ್ಠ 18 ಜನರು ಭೂಗತ ಸುರಂಗದೊಳಗೆ ಸಿಲುಕಿರುವ ಭೀತಿ ಎದುರಾಗಿದೆ.
ದುರಂತ ಸಂಭವಿಸಿದ್ದು ಹೇಗೆ?
ಮೆಪ್ಪಾಡಿಯ ಮೀನಾಕ್ಷಿ ಸೇತುವೆ ಸಮೀಪ ಸುರಂಗ ರಸ್ತೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿತ್ತು. ಕಳೆದ 24 ಗಂಟೆಗಳಲ್ಲಿ ಈ ಭಾಗದಲ್ಲಿ ಬರೋಬ್ಬರಿ 265 ಮಿಮೀ ಅತ್ಯಧಿಕ ಮಳೆಯಾಗಿದೆ. ಭಾರೀ ಮಳೆಯ ಮುನ್ನೆಚ್ಚರಿಕೆಯಾಗಿ ನಿನ್ನೆಯೇ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತಾದರೂ, ದುರಂತ ಸಂಭವಿಸಿದ ಕ್ಷಣದಲ್ಲಿ ಸ್ಥಳದ ಸಮೀಪ ಕೆಲವು ಕಾರ್ಮಿಕರು ಮತ್ತು ಸಾರ್ವಜನಿಕರು ಇದ್ದರು ಎನ್ನಲಾಗಿದೆ. ಮಳೆಯ ಅಬ್ಬರಕ್ಕೆ ಸುರಂಗ ರಸ್ತೆಗಾಗಿ ನಿರ್ಮಿಸಲಾಗಿದ್ದ ಕಾಂಕ್ರೀಟ್ ತಡೆಗೋಡೆ ಕುಸಿದಿದ್ದು, ಅದರ ಬೆನ್ನಲ್ಲೇ ಭಾರೀ ಪ್ರಮಾಣದ ಮಣ್ಣು ಜಾರಿ ಇಡೀ ಕಾಮಗಾರಿ ಪ್ರದೇಶವನ್ನು ಮುಚ್ಚಿಹಾಕಿದೆ. ಎನ್ಡಿಆರ್ಎಫ್ (NDRF) ಮತ್ತು ಕೋಝಿಕ್ಕೋಡ್ನ ತುರ್ತು ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ.
ರಕ್ಷಣಾ ಕಾರ್ಯಕ್ಕೆ ಪ್ರಕೃತಿ ಸವಾಲು
ಭೂಕುಸಿತ ಸಂಭವಿಸಿದ ಬಳಿಕವೂ ಆ ಪ್ರದೇಶದಲ್ಲಿ ಮಣ್ಣು ಜಾರುವ ಪ್ರಕ್ರಿಯೆ ನಿರಂತರವಾಗಿ ಮುಂದುವರಿದಿರುವುದು ರಕ್ಷಣಾ ಕಾರ್ಯಾಚರಣೆಗೆ ದೊಡ್ಡ ಆತಂಕ ತಂದೊಡ್ಡಿದೆ. ಈ ಕುರಿತು ಮಾತನಾಡಿರುವ ಸ್ಥಳೀಯ ವಾರ್ಡ್ ಸದಸ್ಯ ಜಿತಿನ್ ಮೆಪ್ಪಾಡಿ “ಅನೇಕರು ಇನ್ನೂ ನೆಲದಡಿಯಲ್ಲಿ ಸಿಲುಕಿಕೊಂಡಿರುವ ಶಂಕೆ ಇದೆ. ಆದರೆ ಮಣ್ಣು ಇನ್ನೂ ಕುಸಿಯುತ್ತಿರುವುದರಿಂದ ರಕ್ಷಣಾ ಸಿಬ್ಬಂದಿಗೆ ಸ್ಥಳಕ್ಕೆ ತಲುಪಲು ಮತ್ತು ಕಾರ್ಯಾಚರಣೆ ನಡೆಸಲು ತೀವ್ರ ಕಷ್ಟಕರವಾಗಿದೆ ” ಎಂದಿದ್ದಾರೆ.
ಮುಖ್ಯಮಂತ್ರಿಗಳಿಂದ ತುರ್ತು ಸಭೆ, ಸಚಿವರು ಸ್ಥಳಕ್ಕೆ ರವಾನೆ
ಘಟನೆಯ ಗಂಭೀರತೆ ಅರಿತ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ತಕ್ಷಣವೇ ಉನ್ನತ ಮಟ್ಟದ ತುರ್ತು ಸಭೆ ನಡೆಸಿದ್ದಾರೆ. ಕೃಷಿ ಸಚಿವ ಟಿ. ಸಿದ್ದಿಕ್ ಹಾಗೂ ಕಂದಾಯ ಸಚಿವ ಎ.ಪಿ. ಅನಿಲ್ಕುಮಾರ್ ಅವರೊಂದಿಗೆ ಪರಿಸ್ಥಿತಿಯ ಪರಾಮರ್ಶೆ ನಡೆಸಿದ ಸಿಎಂ, ಇಬ್ಬರೂ ಸಚಿವರು ತಕ್ಷಣವೇ ವಯನಾಡಿಗೆ ಧಾವಿಸಿ ರಕ್ಷಣಾ ಕಾರ್ಯಗಳನ್ನು ಸಮನ್ವಯಗೊಳಿಸುವಂತೆ ಸೂಚಿಸಿದ್ದಾರೆ. ಮೀನಂಗಡಿಯ ಎನ್ಡಿಆರ್ಎಫ್ ಘಟಕದೊಂದಿಗೆ, ಕೋಝಿಕ್ಕೋಡ್ನಿಂದಲೂ ಹೆಚ್ಚುವರಿ ರಕ್ಷಣಾ ತಂಡಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ.
ಆತಂಕದಲ್ಲಿ ಸ್ಥಳೀಯರು
ಭಾರೀ ಮಳೆ, ದುರ್ಬಲ ಭೂಸಂರಚನೆ ಮತ್ತು ನಿರ್ಮಾಣ ಕಾಮಗಾರಿ ಪ್ರದೇಶದಲ್ಲಿನ ಅಪಾಯಕಾರಕ ಪರಿಸ್ಥಿತಿಯೇ ಈ ದುರಂತಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಮುಂದಿನ ಕೆಲವು ದಿನಗಳ ಕಾಲ ಈ ಭಾಗದಲ್ಲಿ ಮಳೆ ಮುಂದುವರಿಯುವ ಮುನ್ಸೂಚನೆ ಇರುವುದರಿಂದ ಸ್ಥಳೀಯರಲ್ಲಿ ತೀವ್ರ ಭಯದ ವಾತಾವರಣ ನಿರ್ಮಾಣವಾಗಿದೆ. ನಾಪತ್ತೆಯಾದವರಿಗಾಗಿ ಯುದ್ಧೋಪಾದಿಯಲ್ಲಿ ಶೋಧ ಕಾರ್ಯ ಮುಂದುವರಿದಿದೆ.



