ಬೆಳಗಾವಿ: ನೀವು-ನಾವು ಎಲ್ಲರೂ ಸೇರಿ ಶ್ರಮಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇವೆ. ಇದೇ ಉತ್ಸಾಹವನ್ನು ಮುಂದುವರಿಸಿ 2028ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾರ್ಯಕರ್ತರಿಗೆ ಕರೆ ನೀಡಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. “ಹಿಂದಿನ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಬಡವರ ಪರವಾಗಿ ಕೆಲಸ ಮಾಡಲು ವಿಫಲವಾಯಿತು. ಅವರು ಜನರ ಭಾವನೆಗಳ ಮೇಲೆ ರಾಜಕಾರಣ ಮಾಡಿದರು. ಸಮಾಜದಲ್ಲಿ ಭೇದಭಾವ ಸೃಷ್ಟಿಸುವುದೇ ಅವರ ಕೆಲಸವಾಗಿತ್ತುಎಂದು ಟೀಕಿಸಿದರು.
ರಾಮ ಮಂದಿರದ ವಿಚಾರ ಪ್ರಸ್ತಾಪಿಸಿದ ಡಿ.ಕೆ. ಶಿವಕುಮಾರ್, “ಜನರು ಅಪಾರ ಭಕ್ತಿಯಿಂದ ಚಿನ್ನ-ಬೆಳ್ಳಿ ಸೇರಿದಂತೆ ದೇಣಿಗೆ ನೀಡಿದ್ದಾರೆ. ಆದರೆ ಈಗ ನಡೆಯುತ್ತಿರುವ ಬೆಳವಣಿಗೆಗಳು ಜನರ ನಂಬಿಕೆಗೆ ದ್ರೋಹ ಬಗೆದಂತಿವೆ. ಇದಕ್ಕೆ ಬಿಜೆಪಿ ನಾಯಕರು ಉತ್ತರಿಸಬೇಕು ಎಂದರು.
ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ಮುಜರಾಯಿ ಇಲಾಖೆಗೆ ಒಳಪಡುವ ಎಲ್ಲಾ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಲು ತೀರ್ಮಾನಿಸಲಾಗಿದೆ. ಬೆಂಗಳೂರುಗೆ ಹೋದ ತಕ್ಷಣ ಈ ಕುರಿತು ಆದೇಶ ಹೊರಡಿಸುತ್ತೇನೆ. ಇಂತಹ ಘಟನೆಗಳು ನಮ್ಮ ರಾಜ್ಯದ ದೇವಸ್ಥಾನಗಳಲ್ಲಿ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರ ಆಡಳಿತವನ್ನು ಶ್ಲಾಘಿಸಿದ ಅವರು, “ಅವರು ಎಂಟು ವರ್ಷ ಉತ್ತಮ ಆಡಳಿತ ನೀಡಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬಿದ್ದಾರೆ ಎಂದರು.
ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿ 1.25 ಕೋಟಿ ಮನೆ ಯಜಮಾನಿಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ನೆರವು ನೀಡಲಾಗಿದೆ. ಸಿಎಜಿ ವರದಿಯಲ್ಲಿ ಮೃತರ ಹೆಸರಿಗೆ ಹಣ ಜಮೆಯಾಗಿದೆ ಎಂದು ಉಲ್ಲೇಖಿಸಿದ್ದರೂ, ಯಾರಿಗೂ ಯೋಜನೆ ನಿಲ್ಲಿಸುತ್ತಿಲ್ಲ. ಅಗತ್ಯ ಪರಿಷ್ಕರಣೆ ಮಾತ್ರ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಗೆ ಸಂಬಂಧಿಸಿದಂತೆ ಗುರುತಿನ ಚೀಟಿ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು.
ಎಸ್‌ಐಆರ್ ಪ್ರಕ್ರಿಯೆ ಕುರಿತು ಬಿಜೆಪಿ ಮಾಡುತ್ತಿರುವ ಆರೋಪಗಳನ್ನು ತಳ್ಳಿಹಾಕಿದ ಅವರು, “ವಿಶೇಷವಾಗಿ ಹಿಂದುಳಿದ ವರ್ಗದ ಮತದಾರರು ತಮ್ಮ ಮತದಾನದ ಹಕ್ಕು ಕಳೆದುಕೊಳ್ಳದಂತೆ ಅಗತ್ಯ ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಿ ಎಚ್ಚರಿಕೆಯಿಂದ ಇರಬೇಕು” ಎಂದು ಮನವಿ ಮಾಡಿದರು.
“ಮುಂದಿನ ಎರಡು ವರ್ಷ ಸಂಘಟಿತವಾಗಿ ಕೆಲಸ ಮಾಡಿದರೆ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಎಲ್ಲರಿಗೂ ಹುದ್ದೆ ಸಿಗುತ್ತದೆ ಎಂದು ಭಾವಿಸಬೇಡಿ. ಜನಸೇವೆಯೇ ಮುಖ್ಯ ಎಂಬ ಮನೋಭಾವದಿಂದ ಕೆಲಸ ಮಾಡಿ” ಎಂದು ಕಾರ್ಯಕರ್ತರಿಗೆ ಡಿಕೆಶಿ ಕರೆ ನೀಡಿದರು.
ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಆಸೀಫ್ ಸೇಠ್, ವಿಧಾನ ಪರಿಷತ್ತಿನ ಸದಸ್ಯ ಚನ್ನರಾಜ ಹಟ್ಟಿಹೊಳಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



