Saturday, July 11, 2026
Google search engine

Homeರಾಜ್ಯ'ಮೈಸೂರು ದಸರಾದಲ್ಲಿ ಕಂಬಳ ಬೇಡ' : ಸಿಎಂ ಡಿ.ಕೆ.ಶಿವಕುಮಾರ್‌ಗೆ ಯದುವೀರ್ ಮನವಿ

‘ಮೈಸೂರು ದಸರಾದಲ್ಲಿ ಕಂಬಳ ಬೇಡ’ : ಸಿಎಂ ಡಿ.ಕೆ.ಶಿವಕುಮಾರ್‌ಗೆ ಯದುವೀರ್ ಮನವಿ

ಮೈಸೂರು : ದಸರಾ ಮಹೋತ್ಸವದಲ್ಲಿ ಕಂಬಳ ಸ್ಪರ್ಧೆ ಆಯೋಜಿಸಬಾರದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿರುವುದಾಗಿ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ವಾರಗಳಿಂದ ಕಂಬಳ ವಿಚಾರವಾಗಿ ವ್ಯಾಪಕ ಚರ್ಚೆಗಳು ನಡೆಯುತ್ತಿದ್ದು, ಕರಾವಳಿ ಭಾಗದ ಸಾಂಪ್ರದಾಯಿಕ ಆಚರಣೆಯಾಗಿರುವ ಕಂಬಳವನ್ನು ಮೈಸೂರು ದಸರಾ ಕಾರ್ಯಕ್ರಮದ ಭಾಗವಾಗಿಸುವ ಅಗತ್ಯವಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ಮುಖ್ಯಮಂತ್ರಿಗೆ ತಿಳಿಸಿದ್ದೇನೆ ಎಂದರು.

ಕಂಬಳವನ್ನು ನಡೆಸಬೇಕಾದರೆ ಕರಾವಳಿ ಭಾಗದಲ್ಲೇ ಅದ್ದೂರಿಯಾಗಿ ನಡೆಸಲಿ. ಅದಕ್ಕೆ ಮೈಸೂರಿನವರಿಂದಲೂ ಸಂಪೂರ್ಣ ಸಹಕಾರ ಇರುತ್ತದೆ. ಆದರೆ ಮೈಸೂರು ದಸರಾಕ್ಕೆ ತನ್ನದೇ ಆದ ಪರಂಪರೆ ಮತ್ತು ವೈಶಿಷ್ಟ್ಯವಿದ್ದು, ಅದರ ಮೂಲ ಸ್ವರೂಪವನ್ನು ಉಳಿಸಿಕೊಳ್ಳಬೇಕು ಎಂಬುದು ನಮ್ಮ ಮನವಿಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಹ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಯದುವೀರ್ ಹೇಳಿದರು.

ದಸರಾ ವೇಳೆ ಸರ್ಕಾರ ಮಹೋತ್ಸವಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಸಾರ್ವಜನಿಕರ ಅಭಿಪ್ರಾಯಕ್ಕೆ ಅನುಗುಣವಾಗಿ ದಸರಾವನ್ನು ಅರ್ಥಪೂರ್ಣವಾಗಿ ಆಯೋಜಿಸಬೇಕು ಎಂದು ಸಲಹೆ ನೀಡಿದರು. ಅಲ್ಲದೆ, ಕಳೆದ ವರ್ಷದ ದಸರಾ ಸಂದರ್ಭದಲ್ಲಿ ಎರಡು ಕೊಲೆ ಪ್ರಕರಣಗಳು ನಡೆದಿದ್ದವು. ಅಪ್ರಾಪ್ತ ಬಾಲಕಿಯೊಬ್ಬಳ ಹತ್ಯೆ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ವೇಳೆ ಪೊಲೀಸ್ ಭದ್ರತೆಯನ್ನು ಮತ್ತಷ್ಟು ಬಲಪಡಿಸಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ಹೇಳಿದರು.

ಈ ಬಾರಿ ಅರಮನೆಯ ಸಂಪ್ರದಾಯದ ಕ್ಯಾಲೆಂಡರ್ ಪ್ರಕಾರ 11 ದಿನಗಳ ಕಾಲ ದಸರಾ ನಡೆಯಲಿದ್ದು, ದಸರಾ ಆನೆಗಳ ಸುರಕ್ಷತೆಗೂ ವಿಶೇಷ ಗಮನ ನೀಡಬೇಕು ಎಂದು ಅವರು ಒತ್ತಾಯಿಸಿದರು. ಜೊತೆಗೆ, ದಸರಾ ಪಾಸ್ ವ್ಯವಸ್ಥೆಯನ್ನು ಕೈಬಿಟ್ಟು ಸಾರ್ವಜನಿಕರಿಗೆ ಸುಗಮ ಪ್ರವೇಶ ಕಲ್ಪಿಸಬೇಕು. ಪಾಸ್‌ಗಾಗಿ ಉಂಟಾಗುವ ನೂಕುನುಗ್ಗಲು ಹಾಗೂ ಗೊಂದಲ ತಪ್ಪಿಸಿ, ಅಪರಾಧ ಪ್ರಕರಣಗಳು ನಡೆಯದಂತೆ ಪರಿಣಾಮಕಾರಿ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಯದುವೀರ್ ಮನವಿ ಮಾಡಿದರು.

RELATED ARTICLES
- Advertisment -
Google search engine

Most Popular