ಮೈಸೂರು : ದಸರಾ ಮಹೋತ್ಸವದಲ್ಲಿ ಪ್ರತಿವರ್ಷ ವಿವಾದಕ್ಕೆ ಕಾರಣವಾಗುತ್ತಿರುವ ಸಾಂಪ್ರದಾಯಿಕ ಪಾಸ್ ಹಾಗೂ ಗೋಲ್ಡ್ ಕಾರ್ಡ್ ವಿತರಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಮೈಸೂರು–ಕೊಡಗು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಗೆ ಈ ಕುರಿತು ಸಲಹೆ ನೀಡಿರುವ ಅವರು, ಪ್ರಭಾವಿಗಳಿಗೆ ಪಾಸ್ ಹಂಚುವ ಪದ್ಧತಿಗೆ ತೆರೆ ಎಳೆದು, ಪಾರದರ್ಶಕ ‘ಗ್ಲೋಬಲ್ ಟೆಂಡರ್’ ಮಾದರಿಯಲ್ಲಿ ಗೋಲ್ಡ್ ಪಾಸ್ ಹಾಗೂ ಟಿಕೆಟ್‌ಗಳನ್ನು ವಿತರಿಸುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಪಾಸ್ ವಿತರಣೆ ವಿಚಾರವೇ ಹೆಚ್ಚು ಗೊಂದಲ, ವಿವಾದ ಹಾಗೂ ಅಸಮಾಧಾನಕ್ಕೆ ಕಾರಣವಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪಾಸ್ ಸಂಸ್ಕೃತಿಯನ್ನು ಸಂಪೂರ್ಣವಾಗಿ ಕೈಬಿಡಬೇಕು. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ರೀತಿಯಲ್ಲಿ ಆಧುನಿಕ ಮತ್ತು ಪಾರದರ್ಶಕ ವ್ಯವಸ್ಥೆ ರೂಪಿಸಿದರೆ ಎಲ್ಲರಿಗೂ ಸಮಾನ ಅವಕಾಶ ದೊರೆಯಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ, ದಸರಾ ಮಹೋತ್ಸವದಲ್ಲಿ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳವನ್ನು ಆಯೋಜಿಸುವ ಸರ್ಕಾರದ ಪ್ರಸ್ತಾವನೆಗೆ ಯದುವೀರ್ ಒಡೆಯರ್ ವಿರೋಧ ವ್ಯಕ್ತಪಡಿಸಿದರಲ್ಲದೆ, ಕಂಬಳಕ್ಕೂ ಮೈಸೂರು ದಸರಾಕ್ಕೂ ವಿಭಿನ್ನ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿನ್ನೆಲೆಗಳಿವೆ. ಪ್ರತಿಯೊಂದು ಸಂಪ್ರದಾಯವನ್ನೂ ದಸರಾಕ್ಕೆ ಜೋಡಿಸುವುದು ಸೂಕ್ತವಲ್ಲ. ಕಂಬಳವನ್ನು ಕೇವಲ ಪ್ರದರ್ಶನದ ಕಾರ್ಯಕ್ರಮವನ್ನಾಗಿ ಮಾಡುವುದು ಮೈಸೂರಿನ ಜನರ ಭಾವನೆಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ನಾವು ಕಂಬಳ ಕ್ರೀಡೆಗೆ ವಿರೋಧಿಗಳಲ್ಲ. ಆದರೆ ದಸರಾ ವೇದಿಕೆಯಲ್ಲಿ ಅದರ ಆಯೋಜನೆ ಅಗತ್ಯವಿಲ್ಲ ಎಂಬುದು ನಮ್ಮ ನಿಲುವು. ಸರ್ಕಾರವು ಅನಗತ್ಯ ವಿವಾದಗಳನ್ನು ಸೃಷ್ಟಿಸುವ ಬದಲು, ಪ್ರವಾಸೋದ್ಯಮಕ್ಕೆ ಧಕ್ಕೆಯಾಗದಂತೆ ಈ ಬಾರಿಯ ದಸರಾವನ್ನು ಅಚ್ಚುಕಟ್ಟಾಗಿ ಮತ್ತು ಯಶಸ್ವಿಯಾಗಿ ಆಯೋಜಿಸಬೇಕು ಎಂದು ಅವರು ಒತ್ತಾಯಿಸಿದರು.



