ಚಿಕ್ಕಮಗಳೂರು : ಕಾಫಿನಾಡಿನ ಹಸಿರು ಕಾಡುಗಳ ನಡುವೆ ಸಂಚರಿಸುತ್ತಿದ್ದ ಪ್ರವಾಸಿಗರಿಗೆ ಅಪರೂಪದ ಅನುಭವ ಎದುರಾಗಿದ್ದು, ತಾಲೂಕಿನ ಮಲ್ಲಂದೂರು ಸಮೀಪದ ಕವಿಕಲ್ ಮಠದ ರಸ್ತೆಯಲ್ಲಿ ಬೃಹತ್ ಗಾತ್ರದ ಹುಲಿಯೊಂದು ದಿಢೀರ್ ಪ್ರತ್ಯಕ್ಷವಾಗಿ, ಕೆಲಕಾಲ ರಸ್ತೆ ಬದಿಯಲ್ಲಿ ರಾಜಗಾಂಭೀರ್ಯದಿಂದ ಸಂಚರಿಸಿದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರಸ್ತೆ ಪಕ್ಕದ ದಟ್ಟ ಪೊದೆಗಳಿಂದ ಹೊರಬಂದ ಹುಲಿ ನಿಧಾನವಾಗಿ ರಸ್ತೆ ಬದಿಯಲ್ಲೇ ಹೆಜ್ಜೆ ಹಾಕುತ್ತಿದ್ದಾಗ, ಅಲ್ಲಿದ್ದ ಪ್ರವಾಸಿಗರು ಆ ಅಪರೂಪದ ಕ್ಷಣವನ್ನು ತಮ್ಮ ಮೊಬೈಲ್ಗಳಲ್ಲಿ ಸೆರೆಹಿಡಿದರು. ಕಾಡಿನ ರಾಜನನ್ನು ಕಣ್ಣಾರೆ ಕಂಡ ಪ್ರವಾಸಿಗರು ರೋಮಾಂಚನಗೊಂಡರೂ, ಕ್ಷಣಕಾಲ ಆತಂಕಕ್ಕೂ ಒಳಗಾದರು. ಸ್ವಲ್ಪ ದೂರ ರಸ್ತೆಯಲ್ಲೇ ನಡೆದ ಹುಲಿ, ಬಳಿಕ ವಾಹನದತ್ತ ಗಂಭೀರವಾಗಿ ದೃಷ್ಟಿ ಹರಿಸಿ, ಯಾವುದೇ ಆತಂಕ ಸೃಷ್ಟಿಸದೆ ಮತ್ತೆ ದಟ್ಟ ಅರಣ್ಯದೊಳಗೆ ಮರೆಯಾಯಿತು.
ಮಂಜು ಮುಸುಕಿದ ಹಸಿರು ಕಾನನದ ನಡುವೆ ಹುಲಿಯ ನಡಿಗೆಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕೃತಿ ಮತ್ತು ವನ್ಯಜೀವಿ ಪ್ರಿಯರ ಗಮನ ಸೆಳೆಯುತ್ತಿದ್ದು, ಕವಿಕಲ್ ಮಠ ಹಾಗೂ ಮಲ್ಲಂದೂರು ಸುತ್ತಮುತ್ತಲಿನ ಪ್ರದೇಶಗಳು ಭದ್ರಾ ಅಭಯಾರಣ್ಯದ ವ್ಯಾಪ್ತಿಗೆ ಹೊಂದಿಕೊಂಡಿರುವುದರಿಂದ ಹುಲಿ ಸೇರಿದಂತೆ ಹಲವು ವನ್ಯಜೀವಿಗಳ ಸಂಚಾರ ಸಾಮಾನ್ಯವಾಗಿದೆ.
ಈ ಹಿನ್ನೆಲೆ ಅರಣ್ಯ ಇಲಾಖೆ ಪ್ರವಾಸಿಗರು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸಲಹೆ ನೀಡಿದೆ.



