ಮೈಸೂರು: ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ಅಂತ್ಯಸಂಸ್ಕಾರ ಮೈಸೂರಿನಲ್ಲೇ ನಡೆಯಲಿದೆ ಎಂದು ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ. ಕುಟುಂಬಸ್ಥರೊಂದಿಗೆ ಚರ್ಚಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ನಾಳೆ ಬೆಳಗ್ಗೆ 8 ಗಂಟೆಯಿಂದ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಸಂಜೆ ವೇಳೆಗೆ ಮೈಸೂರು ತಾಲೂಕಿನ ಕಣಿಯನಹುಂಡಿಯ ನವೀನ್ ಫಾರಂ ಹೌಸ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ. ಎಸ್. ಜಾನಕಿ ಅವರ ಇಚ್ಛೆಯಂತೆ ಮೈಸೂರಿನಲ್ಲೇ ಅಂತ್ಯಕ್ರಿಯೆ ನಡೆಸಲಾಗುತ್ತಿದೆ ಎಂದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೂರವಾಣಿ ಮೂಲಕ ಮಾತನಾಡಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸುವಂತೆ ಸೂಚನೆ ನೀಡಿದ್ದಾರೆ. ಅಭಿಮಾನಿಗಳು ಆಸ್ಪತ್ರೆ ಬಳಿ ಆಗಮಿಸದೆ, ಬೆಳಗ್ಗೆ 8 ಗಂಟೆಯ ನಂತರ ಅಂತಿಮ ನಮನ ಸಲ್ಲಿಸುವಂತೆ ಸಚಿವರು ಮನವಿ ಮಾಡಿದ್ದಾರೆ.



