Sunday, July 12, 2026
Google search engine

Homeಸಿನಿಮಾಗಾನಕೋಗಿಲೆಗೆ ಸರ್ಕಾರಿ ಗೌರವದ ಅಂತಿಮ ನಮನ : ಕಣಿಯನಹುಂಡಿಯಲ್ಲಿ ಸಿದ್ಧತೆ ಪೂರ್ಣ

ಗಾನಕೋಗಿಲೆಗೆ ಸರ್ಕಾರಿ ಗೌರವದ ಅಂತಿಮ ನಮನ : ಕಣಿಯನಹುಂಡಿಯಲ್ಲಿ ಸಿದ್ಧತೆ ಪೂರ್ಣ

ಮೈಸೂರು : ದಶಕಗಳ ಕಾಲ ತಮ್ಮ ಅಮೋಘ ಕಂಠಸಿರಿಯಿಂದ ಸಂಗೀತ ಪ್ರಿಯರ ಮನಗೆದ್ದಿದ್ದ ಗಾನಕೋಗಿಲೆ ಎಸ್.ಜಾನಕಿ ಅವರ ಅಂತಿಮ ವಿಧಿವಿಧಾನಗಳಿಗೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಕಣಿಯನಹುಂಡಿ ಗ್ರಾಮ ಸಜ್ಜಾಗಿದ್ದು, ಜಾನಕಿಯಮ್ಮ ಅವರ ಇಚ್ಛೆಯಂತೆ, ಅವರು ಪ್ರೀತಿಯಿಂದ ಖರೀದಿಸಿದ್ದ ಸ್ವಂತ ತೋಟದ ಜಾಗದಲ್ಲೇ ಅಂತ್ಯಸಂಸ್ಕಾರ ನೆರವೇರಿಸಲು ಕುಟುಂಬಸ್ಥರು ಹಾಗೂ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಇಂದು ಸಂಜೆ 5.30ರೊಳಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳು ನಡೆಯಲಿವೆ. ತಾವು ನಿಧನರಾದ ಬಳಿಕ ತಮ್ಮದೇ ತೋಟದ ಮಣ್ಣಿನಲ್ಲಿ ಅಂತಿಮ ವಿಶ್ರಾಂತಿ ಪಡೆಯಬೇಕು ಎಂಬ ಆಸೆಯನ್ನು ಜಾನಕಿಯಮ್ಮ ಅವರು ಆಪ್ತರ ಬಳಿ ವ್ಯಕ್ತಪಡಿಸಿದ್ದರು. ಅವರ ಕೊನೆಯ ಆಶಯಕ್ಕೆ ಗೌರವ ನೀಡಿರುವ ಕುಟುಂಬ, ಅದೇ ಜಾಗದಲ್ಲಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿದೆ.

ಕಣಿಯನಹುಂಡಿ ಗ್ರಾಮದ ಮುಖಂಡ ಬಸವರಾಜು ಮಾತನಾಡಿ, ಜಾನಕಿಯಮ್ಮ ಅವರು ಹಳ್ಳಿಯ ವಾತಾವರಣಕ್ಕೆ ಮನಸೋತು ಎರಡು ಎಕರೆ ಜಮೀನು ಖರೀದಿಸಿದ್ದರು. ಅಲ್ಲಿ ಸುಂದರವಾದ ಮನೆ ನಿರ್ಮಿಸಿ ನೆಮ್ಮದಿಯ ಜೀವನ ನಡೆಸುವ ಕನಸು ಹೊಂದಿದ್ದರು. ಆದರೆ ಅವರು ಮನೆ ಕಟ್ಟಲು ಬಯಸಿದ್ದ ಅದೇ ಜಾಗದಲ್ಲಿ ಇಂದು ಅಂತಿಮ ವಿಧಿವಿಧಾನಗಳು ನಡೆಯುತ್ತಿರುವುದು ನೋವಿನ ಸಂಗತಿ ಎಂದು ಭಾವುಕರಾದರು.

ಈ ನಡುವೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದ್ದು, ಅಂತಿಮ ದರ್ಶನಕ್ಕೆ ಆಗಮಿಸುವ ಅಭಿಮಾನಿಗಳು, ಗಣ್ಯರು ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಎರಡು ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.

ಚಿತ್ರರಂಗದ ಗಣ್ಯರು, ವಿವಿಐಪಿ ಗಣ್ಯರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಆಗಮಿಸುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ವ್ಯವಸ್ಥೆಗಳನ್ನು ಕೈಗೊಂಡಿದೆ. ಕಣಿಯನಹುಂಡಿ ಗ್ರಾಮದ ಕಿರಿದಾದ ರಸ್ತೆಗಳನ್ನು ಗಮನದಲ್ಲಿಟ್ಟುಕೊಂಡು ಸಂಚಾರ ವ್ಯವಸ್ಥೆಯಲ್ಲೂ ವಿಶೇಷ ಕ್ರಮ ಕೈಗೊಳ್ಳಲಾಗಿದೆ. ಸ್ವರ ಸಾಮ್ರಾಜ್ಞಿ ಎಸ್.ಜಾನಕಿ ಅವರ ಅಂತಿಮ ಪಯಣಕ್ಕೆ ಕಣಿಯನಹುಂಡಿ ಗ್ರಾಮ ಸಾಕ್ಷಿಯಾಗಲಿದೆ.

RELATED ARTICLES
- Advertisment -
Google search engine

Most Popular