Sunday, July 12, 2026
Google search engine

Homeರಾಜ್ಯಗಾನಕೋಗಿಲೆ ಎಸ್.ಜಾನಕಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ : ಸಿಎಂ ಡಿ.ಕೆ.ಶಿವಕುಮಾರ್

ಗಾನಕೋಗಿಲೆ ಎಸ್.ಜಾನಕಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ : ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : ಭಾರತೀಯ ಚಿತ್ರರಂಗದ ಅಮೂಲ್ಯ ಧ್ವನಿಯಾಗಿದ್ದ ಖ್ಯಾತ ಗಾಯಕಿ ಎಸ್.ಜಾನಕಿ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೈಸೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಇದೇ ವೇಳೆ ಜಾನಕಮ್ಮ ಅವರ ಕುಟುಂಬದವರೊಂದಿಗೆ ಮಾತನಾಡಿರುವುದಾಗಿ ತಿಳಿಸಿದ ಸಿಎಂ, ಅವರು ಹೈದರಾಬಾದ್‌ನಿಂದ ಬಂದು ಮೈಸೂರಿನಲ್ಲೇ ನೆಲೆಸಿದ್ದರು ಎಂದು ಹೇಳಿದರು. ಮೈಸೂರಿನ ಮೇಲಿನ ಅವರ ವಿಶೇಷ ಪ್ರೀತಿ ಹಾಗೂ ನಂಟನ್ನು ಸ್ಮರಿಸಿದ ಅವರು, ನಮ್ಮ ಭಾಷೆ, ನಮ್ಮ ನೆಲ ಮತ್ತು ಮೈಸೂರಿನ ಬಗ್ಗೆ ಜಾನಕಮ್ಮ ಅವರು ಹೊಂದಿದ್ದ ಅಭಿಮಾನ ಅಪಾರವಾಗಿತ್ತು ಎಂದು ಹೇಳಿದರು.

ಎಸ್.ಜಾನಕಿ ಅವರ ವೃತ್ತಿಜೀವನದ ಮೊದಲ ಹಾಡಿನ ರೆಕಾರ್ಡಿಂಗ್ ಹಾಗೂ ಕೊನೆಯ ಹಾಡಿನ ರೆಕಾರ್ಡಿಂಗ್ ಎರಡೂ ಮೈಸೂರಿನಲ್ಲೇ ನಡೆದಿರುವುದು ವಿಶೇಷ ಎಂದು ಸಿಎಂ ಡಿ.ಕೆ.ಶಿವಕುಮಾರ್ ನೆನಪಿಸಿಕೊಂಡರು. 40 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದ ಜಾನಕಿ ಅವರು ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳಿಗೆ ಪಾತ್ರರಾಗಿದ್ದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೂ ಅವರು ಭಾಜನರಾಗಿದ್ದರು. ಇಷ್ಟೊಂದು ಸಾಧನೆ ಮಾಡಿದರೂ ಅತ್ಯಂತ ಸರಳ ಜೀವನ ನಡೆಸಿದ ವ್ಯಕ್ತಿತ್ವ ಅವರದ್ದಾಗಿತ್ತು ಎಂದು ಸಿಎಂ ಗುಣಗಾನ ಮಾಡಿದರು. ಜಾನಕಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಮೈಸೂರಿನಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಸರ್ಕಾರದ ಪರವಾಗಿ ಅಂತಿಮ ನಮನ ಸಲ್ಲಿಸಲು ಅಗತ್ಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಮುಂದಿನ ದಿನಗಳಲ್ಲಿ ಚಿತ್ರರಂಗದ ಗಣ್ಯರೊಂದಿಗೆ ಚರ್ಚಿಸಿ, ಜಾನಕಮ್ಮ ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular