ಮೈಸೂರು : ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಖ್ಯಾತರಾಗಿದ್ದ ಎಸ್.ಜಾನಕಿ ಅವರ ಸಂಗೀತ ಪಯಣ ಭಾರತೀಯ ಸಿನಿಸಂಗೀತದ ಸುವರ್ಣ ಅಧ್ಯಾಯವಾಗಿದ್ದು, 1957ರಲ್ಲಿ ಗಾಯನ ಕ್ಷೇತ್ರಕ್ಕೆ ಕಾಲಿಟ್ಟ ಜಾನಕಮ್ಮ ಅವರು ಆರು ದಶಕಗಳಿಗೂ ಹೆಚ್ಚು ಕಾಲ ತಮ್ಮ ಅದ್ಭುತ ಕಂಠಸಿರಿಯಿಂದ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದ್ದರು.
20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಎಸ್.ಜಾನಕಿ ಅವರು ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳು, 33 ರಾಜ್ಯ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರತಿಷ್ಠಿತ ಗೌರವಗಳಿಗೆ ಪಾತ್ರರಾಗಿದ್ದಾರೆ. ಅಲ್ಲದೆ ಕನ್ನಡದಲ್ಲೇ ಅತಿ ಹೆಚ್ಚು ಹಾಡುಗಳನ್ನು ಹಾಡಿರುವ ಹೆಗ್ಗಳಿಕೆ ಅವರಿಗಿದೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಎಸ್.ಜಾನಕಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಹಾಗೂ ನಟಿ ಜಯಮಾಲಾ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಜಾನಕಮ್ಮ ಅವರ ನೆನಪಿಗಾಗಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂಗೀತ ಅಧ್ಯಯನ ಪೀಠ ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.
1975ರಿಂದ ಜಾನಕಮ್ಮ ಅವರನ್ನು ಬಲ್ಲೆ. ‘ಪ್ರೇಮದ ಕಾಣಿಕೆ’ ಚಿತ್ರದ ಸಂದರ್ಭ ಅವರೊಂದಿಗೆ ಪರಿಚಯವಾಯಿತು. ಅವರಲ್ಲಿದ್ದ ಗಾಯನದ ವೈವಿಧ್ಯತೆ ಅಪರೂಪದ್ದು. ಭಾರತೀಯ ಸಂಗೀತ ಇತಿಹಾಸದಲ್ಲಿ ಅವರು ತಮ್ಮದೇ ಆದ ದಾಖಲೆ ನಿರ್ಮಿಸಿದ್ದಾರೆ. ಅವರನ್ನು ಕಳೆದುಕೊಂಡಿರುವುದು ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಜಯಮಾಲಾ ಹೇಳಿದರು.
ಜಾನಕಮ್ಮ ಅವರು ಮೈಸೂರಿನೊಂದಿಗೆ ವಿಶೇಷ ನಂಟು ಹೊಂದಿದ್ದರು. ಇದೇ ನೆಲದಲ್ಲಿ ಅವರು ಅಂತಿಮ ಉಸಿರೆಳೆದಿರುವುದು ಭಾವುಕ ಕ್ಷಣವಾಗಿದೆ. ಅವರ ನೆನಪನ್ನು ಶಾಶ್ವತವಾಗಿರಿಸಲು ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂಗೀತ ಅಧ್ಯಯನ ಪೀಠ ಸ್ಥಾಪಿಸುವ ಮೂಲಕ ಅವರನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಕೆಲಸ ಆಗಬೇಕು ಎಂದು ಜಯಮಾಲಾ ತಿಳಿಸಿದರು.



