ಮೈಸೂರು : ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ತಮ್ಮ ಅಮೋಘ ಗಾಯನದ ಮೂಲಕ ಕೋಟ್ಯಂತರ ಸಂಗೀತಾಭಿಮಾನಿಗಳ ಮನಗೆದ್ದ ಗಾನಕೋಗಿಲೆ ಎಸ್.ಜಾನಕಿ ಅವರ ನಿಧನಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (KSOU) ಕುಲಪತಿ ಪ್ರೊ.ಎ.ಪಿ.ಜ್ಞಾನ ಪ್ರಕಾಶ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮವೋದರಲ್ಲಿ ಮಾತನಾಡಿದ ಅವರು, ಕನ್ನಡದಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿ ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದ ಎಸ್.ಜಾನಕಿ ಅವರ ಅಗಲಿಕೆ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ. ಅವರ ಕಂಠಸಿರಿ, ಗಾಯನ ವೈಭವ ಮತ್ತು ಸಂಗೀತ ಪರಂಪರೆ ಮುಂದಿನ ಪೀಳಿಗೆಗಳಿಗೂ ತಲುಪಬೇಕು.
ಈ ಉದ್ದೇಶದಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ‘ಎಸ್.ಜಾನಕಿ ಸ್ಮಾರಕ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ’ ಸ್ಥಾಪಿಸುವ ಕುರಿತು ಗಂಭೀರವಾಗಿ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.
ಇನ್ನೂ ಜಾನಕಿ ಅವರು ಕೇವಲ ಗಾಯಕಿಯಷ್ಟೇ ಅಲ್ಲ, ಭಾರತೀಯ ಸಂಗೀತ ಲೋಕದ ಅಮೂಲ್ಯ ಸಾಂಸ್ಕೃತಿಕ ಸಂಪತ್ತಾಗಿದ್ದರು. ಅವರ ಸಾವಿರಾರು ಹಾಡುಗಳು ಭಾಷೆ, ಕಾಲ ಮತ್ತು ತಲೆಮಾರುಗಳ ಗಡಿಗಳನ್ನು ಮೀರಿ ಸಂಗೀತಾಸಕ್ತರ ಹೃದಯದಲ್ಲಿ ಅಚ್ಚಳಿಯದ ಸ್ಥಾನ ಪಡೆದಿವೆ. ಕನ್ನಡ ಚಿತ್ರರಂಗದ ಸುವರ್ಣಯುಗದ ಅನೇಕ ಅಮರ ಗೀತೆಗಳಿಗೆ ಅವರು ತಮ್ಮ ಅಪರೂಪದ ಕಂಠದ ಮೂಲಕ ಜೀವ ತುಂಬಿದ್ದರು ಎಂದು ಅವರು ಸ್ಮರಿಸಿದರು.
ಪ್ರಸ್ತಾವಿತ ಕೇಂದ್ರದಲ್ಲಿ ಎಸ್.ಜಾನಕಿ ಅವರ ಅಪರೂಪದ ಹಾಡುಗಳು, ಸಂದರ್ಶನಗಳು, ಧ್ವನಿಮುದ್ರಣಗಳು, ಸಂಗೀತ ದಾಖಲೆಗಳು ಹಾಗೂ ಸಂಶೋಧನಾ ಸಾಮಗ್ರಿಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ ಸಂರಕ್ಷಿಸುವ ಯೋಜನೆ ರೂಪಿಸಲಾಗುವುದು. ಜೊತೆಗೆ ಸಂಗೀತ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಯುವ ಗಾಯಕ-ಗಾಯಕಿಯರಿಗೆ ಅಧ್ಯಯನ ಹಾಗೂ ಸಂಶೋಧನೆಗೆ ನೆರವಾಗುವಂತೆ ಕೇಂದ್ರವನ್ನು ಅಭಿವೃದ್ಧಿಪಡಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಎಸ್.ಜಾನಕಿ ಅವರ ಗಾಯನ ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸುವುದೇ ಅವರಿಗೆ ಸಲ್ಲಿಸುವ ಅತ್ಯುತ್ತಮ ಗೌರವ. ಅವರ ಧ್ವನಿ ಸದಾ ಅಮರವಾಗಿರಲಿದೆ ಎಂದು ಪ್ರೊ.ಎ.ಪಿ.ಜ್ಞಾನ ಪ್ರಕಾಶ್ ನುಡಿನಮನ ಸಲ್ಲಿಸಿದರು.



