ನೆಲಮಂಗಲ : ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಆರೋಪ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಕೇಳಿಬಂದಿದ್ದು, ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಬೇಕಿದ್ದ ಸಿಬ್ಬಂದಿ, ಸಾರ್ವಜನಿಕರನ್ನು ಒಂದೇ ಸ್ಥಳಕ್ಕೆ ಕರೆಸಿ ಗೃಹಜ್ಯೋತಿ ಪರಿಷ್ಕರಣಾ ಅರ್ಜಿಗಳನ್ನು ಭರ್ತಿ ಮಾಡಿಸುತ್ತಿದ್ದಾರೆ ಎಂಬ ಆರೋಪಗಳು ವ್ಯಕ್ತವಾಗಿವೆ.
ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ವ್ಯಾಪ್ತಿಯ ನಾರಾಯಣಪ್ಪಪಾಳ್ಯದಲ್ಲಿ ಈ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಸಿಬ್ಬಂದಿ ಬಡಾವಣೆಯ ನಿವಾಸಿಗಳನ್ನು ಒಂದೆಡೆ ಸೇರಿಸಿ ಅರ್ಜಿ ಭರ್ತಿ ಮಾಡಿಸಿರುವುದಾಗಿ ಆರೋಪಿಸಿದ್ದಾರೆ. ಈ ದೃಶ್ಯಗಳನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಂಡಿದ್ದಾರೆ.
ಇನ್ನೂ ಗೃಹಜ್ಯೋತಿ ಪರಿಷ್ಕರಣಾ ಅರ್ಜಿಯಲ್ಲಿ ಮನೆಯವರು ಹೊರರಾಜ್ಯದವರೇ, ಆದಾಯ ತೆರಿಗೆ ಪಾವತಿದಾರರೇ, ಎಪಿಎಲ್ ಕಾರ್ಡ್ ಹೊಂದಿದವರೇ, ಬಾಡಿಗೆ ಮನೆಯಲ್ಲಿರುವವರೇ ಸೇರಿದಂತೆ ಹಲವು ಮಾಹಿತಿಗಳನ್ನು ಪರಿಶೀಲಿಸಬೇಕಿದೆ. ಆದರೆ ಸೂಕ್ತ ಪರಿಶೀಲನೆ ಇಲ್ಲದೆ ಸಾಮೂಹಿಕವಾಗಿ ಅರ್ಜಿ ಭರ್ತಿ ಮಾಡಿಸುವುದರಿಂದ ನಿಜವಾದ ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ದೊರೆಯದ ಆತಂಕವಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ, ಪರಿಷ್ಕರಣೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



