Tuesday, July 14, 2026
Google search engine

Homeರಾಜಕೀಯಕಾವೇರಿ ನೀರು ಬಿಡುಗಡೆ ಬಗ್ಗೆ CWMA ಸಭೆಯ ಬಳಿಕ ನಿರ್ಧಾರ : ಸಿಎಂ ಡಿ.ಕೆ.ಶಿವಕುಮಾರ್

ಕಾವೇರಿ ನೀರು ಬಿಡುಗಡೆ ಬಗ್ಗೆ CWMA ಸಭೆಯ ಬಳಿಕ ನಿರ್ಧಾರ : ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : ನೀರಾವರಿಗಾಗಿ ಕಾವೇರಿ ನೀರು ಬಿಡುಗಡೆ ಮಾಡುವ ಕುರಿತು ಜುಲೈ 15ರಂದು ನಡೆಯಲಿರುವ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಸಭೆಯ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯದ ರೈತರ ಹಿತಾಸಕ್ತಿ ಕಾಪಾಡುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.

ಇನ್ನೂ ಕಾವೇರಿ ವಿಚಾರದಲ್ಲಿ ರೈತರನ್ನು ರಕ್ಷಿಸಬೇಕು. ಕುಡಿಯುವ ನೀರಿನ ಅಗತ್ಯಕ್ಕೂ ಆದ್ಯತೆ ನೀಡಬೇಕು. ಇದೇ ವೇಳೆ ತಮಿಳುನಾಡಿಗೆ ನೀರು ಬಿಡುಗಡೆ ಕುರಿತು ಸುಪ್ರೀಂ ಕೋರ್ಟ್ ಆದೇಶವನ್ನೂ ಪಾಲಿಸಬೇಕಿದೆ. ಜುಲೈ 15ರಂದು ನಡೆಯುವ CWMA ಸಭೆಯಲ್ಲಿ ಕರ್ನಾಟಕದ ಪರವಾದ ಅಂಶಗಳನ್ನು ಮಂಡಿಸಲಾಗುವುದು. ಸಭೆಯ ಬಳಿಕ ನೀರು ಬಿಡುಗಡೆ ಕುರಿತು ಸರ್ಕಾರ ನಿರ್ಧಾರ ಪ್ರಕಟಿಸಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಇದೇ ವೇಳೆ ಮಂಡ್ಯ ಜಿಲ್ಲೆಯ ಶಾಸಕರು ನೀರಾವರಿಗಾಗಿ ತಕ್ಷಣ ಕಾವೇರಿ ನೀರು ಬಿಡುಗಡೆ ಮಾಡುವಂತೆ ಮನವಿ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಮಂಡ್ಯ ಮತ್ತು ಶ್ರೀರಂಗಪಟ್ಟಣದ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಅಭಿಪ್ರಾಯವನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಅವರ ಮನವಿಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, CWMA ಸಭೆಯ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ತಿರುಪತಿ ದೇವಸ್ಥಾನದಲ್ಲಿ ಕರ್ನಾಟಕದ ಜನಪ್ರತಿನಿಧಿಗಳಿಗೆ ಮೊದಲ ಆರತಿ ಅವಕಾಶ ಕಲ್ಪಿಸುವ ವಿಚಾರದ ಕುರಿತು ಮಾತನಾಡಿದ ಅವರು, ಮೈಸೂರು ಮಹಾರಾಜರ ಕಾಲದಿಂದಲೂ ತಿರುಪತಿ ದೇವಸ್ಥಾನದ ಮೊದಲ ಆರತಿ ಕರ್ನಾಟಕದೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಿದರು.

ಈವರೆಗೆ ಕರ್ನಾಟಕದ ಪರವಾಗಿ ಒಬ್ಬ ಅಧಿಕಾರಿಯೊಬ್ಬರು ಮೊದಲ ಆರತಿಯಲ್ಲಿ ಭಾಗವಹಿಸುತ್ತಿದ್ದರು. ಇನ್ನು ಮುಂದೆ ಕರ್ನಾಟಕದಿಂದ ದರ್ಶನಕ್ಕೆ ತೆರಳುವ ಜನಪ್ರತಿನಿಧಿಗಳು, ನ್ಯಾಯಮೂರ್ತಿಗಳು, ಸರ್ಕಾರಿ ಅಧಿಕಾರಿಗಳು, ಸಂಸದರು, ಮೇಯರ್‌ಗಳು, ತಹಶೀಲ್ದಾರ್‌ಗಳು ಸೇರಿದಂತೆ ವಿವಿಧ ಗಣ್ಯರಿಗೆ ಈ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು. ಈ ಅವಕಾಶ ಯಾವುದೇ ಒಂದು ರಾಜಕೀಯ ಪಕ್ಷದ ಜನಪ್ರತಿನಿಧಿಗಳಿಗೆ ಮಾತ್ರ ಸೀಮಿತವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿ, ಇದಕ್ಕಾಗಿ ನಿಗದಿತ ಮಾರ್ಗಸೂಚಿಗಳು ಇರಲಿವೆ ಎಂದರು.

ನಾವು ಮೊದಲ ಆರತಿ ಸ್ವೀಕರಿಸುವ ವ್ಯವಸ್ಥೆಯಲ್ಲಿ ಮಾತ್ರ ಬದಲಾವಣೆ ಮಾಡುತ್ತಿದ್ದೇವೆ. ಉಳಿದ ಎಲ್ಲ ನಿಯಮಗಳು ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯ ಮಾರ್ಗಸೂಚಿಗಳ ಪ್ರಕಾರವೇ ಮುಂದುವರಿಯುತ್ತವೆ. ದೇವಸ್ಥಾನದ ಆಡಳಿತದಲ್ಲಿ ರಾಜ್ಯ ಸರ್ಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

RELATED ARTICLES
- Advertisment -
Google search engine

Most Popular