ದೆಹಲಿ : ಮುಂಗಾರು ಮಳೆಯ ಕೊರತೆಯಿಂದ ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನೀರಿನ ಅಭಾವ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆ ಮಹತ್ವ ಪಡೆದುಕೊಂಡಿದೆ.
ದೆಹಲಿಯಲ್ಲಿ ನಡೆದ CWRC ಸಭೆಯಲ್ಲಿ ಕಾವೇರಿ ಜಲಾನಯನ ಪ್ರದೇಶದ ಪ್ರಸ್ತುತ ಪರಿಸ್ಥಿತಿಯನ್ನು ಅಧಿಕಾರಿಗಳು ವಿವರಿಸಿದ್ದಾರೆ. ಈ ವೇಳೆ ತಮಿಳುನಾಡು ತನ್ನ ಪಾಲಿನ ನೀರು ಬಿಡುಗಡೆ ಮಾಡುವಂತೆ ಒತ್ತಾಯಿಸಿದರೆ, ಕರ್ನಾಟಕ ಸದ್ಯದ ಪರಿಸ್ಥಿತಿಯಲ್ಲಿ ನೀರು ಬಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದರ ಬಗ್ಗೆ ಕರ್ನಾಟಕದ ವಾದವೇನು ಎಂಬುದನ್ನು ನೋಡುವುದದಾರೆ ಕಾವೇರಿ ಕೊಳ್ಳದಲ್ಲಿ ಮಳೆಯ ಕೊರತೆ ಉಂಟಾಗಿದ್ದು, ಜೂನ್ ತಿಂಗಳಲ್ಲಿ ಜಲಾಶಯಗಳಿಗೆ ಬಹುತೇಕ ಒಳಹರಿವು ಇರಲಿಲ್ಲ. ಜುಲೈನಲ್ಲಿ ಕೆಲವು ಭಾಗಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದ್ದರೂ, ಜಲಾಶಯಗಳ ನೀರಿನ ಮಟ್ಟದಲ್ಲಿ ದೊಡ್ಡ ಸುಧಾರಣೆ ಕಂಡುಬಂದಿಲ್ಲ ಎಂದು ಕರ್ನಾಟಕ ತಿಳಿಸಿದೆ.
ಸದ್ಯ ಲಭ್ಯವಿರುವ ನೀರನ್ನು ಮುಂದಿನ ಅವಧಿಯಲ್ಲಿ ಕುಡಿಯುವ ನೀರಿನ ಅಗತ್ಯಕ್ಕಾಗಿ ಸಂರಕ್ಷಿಸಬೇಕಾಗಿದೆ. ರಾಜ್ಯದಲ್ಲಿ ರೈತರು ಕೃಷಿಗೆ ನೀರು ಕೇಳುತ್ತಿದ್ದರೂ ಪರಿಸ್ಥಿತಿಯ ಕಾರಣದಿಂದ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದು ಸಾಧ್ಯವಿಲ್ಲ ಎಂದು ಕರ್ನಾಟಕದ ಅಧಿಕಾರಿಗಳು ಸಭೆಯಲ್ಲಿ ವಾದಿಸಿದ್ದಾರೆ.
ತಮಿಳುನಾಡಿನಲ್ಲಿ ಮಳೆಯ ನಿರೀಕ್ಷೆ ಇದ್ದರೂ, ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವುದರಿಂದ ರಾಜ್ಯದ ಹಿತಾಸಕ್ತಿಯನ್ನು ಗಮನಿಸಬೇಕೆಂದು ತಿಳಿಸಲಾಗಿದೆ.
ನೀರು ಬಿಡುಗಡೆಗೆ CWRC ಸ್ಪಷ್ಟ ಸೂಚನೆ ನೀಡಿಲ್ಲ : ತಮಿಳುನಾಡು ನೀರಿಗಾಗಿ ಮನವಿ ಮಾಡಿದ್ದರೂ, CWRC ಸಭೆಯಲ್ಲಿ ಕರ್ನಾಟಕಕ್ಕೆ ತಕ್ಷಣ ನೀರು ಬಿಡುವಂತೆ ಯಾವುದೇ ಸ್ಪಷ್ಟ ನಿರ್ದೇಶನ ನೀಡಿಲ್ಲ ಎಂದು ತಿಳಿದುಬಂದಿದೆ. ಸಭೆ ಬಳಿಕ ಸಚಿವ ರಾಮಲಿಂಗಾರೆಡ್ಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, CWRC ಚರ್ಚೆಯ ವಿವರಗಳನ್ನು ಪಡೆದುಕೊಂಡಿದ್ದಾರೆ.



