ಬೆಂಗಳೂರು : ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಸಂಬಂಧಿ ಹಾಗೂ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ಡಾ.ವೈ.ಮಂಜುನಾಥ್ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಕೈಗೊಂಡಿದ್ದ ತನಿಖಾ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿ ಇ.ಡಿ. ನಡೆಸುತ್ತಿರುವ ಶೋಧ ಮತ್ತು ಜಪ್ತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯ ಆದೇಶಿಸಿದೆ.
ಕಳೆದ ಜೂನ್ 23ರಂದು ಬೆಂಗಳೂರು, ಬೆಳಗಾವಿ ಹಾಗೂ ಗೋವಾದ ಇ.ಡಿ. ಅಧಿಕಾರಿಗಳು ಜಂಟಿಯಾಗಿ ಡಾ.ಮಂಜುನಾಥ್ ಹಾಗೂ ಅವರ ಸಂಬಂಧಿಕರ ನಿವಾಸಗಳ ಮೇಲೆ ದಾಳಿ ನಡೆಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ನಡೆಸಿತು.
ವಿಚಾರಣೆ ವೇಳೆ ಇ.ಡಿ. ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವುದು ಸ್ವಾಗತಾರ್ಹವಾದರೂ, ಎಲ್ಲ ಕ್ರಮಗಳು ಕಾನೂನಿನ ಚೌಕಟ್ಟಿನೊಳಗೆ ಇರಬೇಕು. ಕಾನೂನುಬದ್ಧವಾಗಿ ಕ್ರಮ ಕೈಗೊಂಡರೆ ನ್ಯಾಯಾಲಯ ಮಧ್ಯಪ್ರವೇಶಿಸುವ ಪ್ರಶ್ನೆಯೇ ಇಲ್ಲ ಎಂದು ನ್ಯಾಯಮೂರ್ತಿ ಎಚ್ಚರಿಸಿದರು.
ಪ್ರಕರಣದ ಮುಂದಿನ ವಿಚಾರಣೆ ಜುಲೈ 22ರಂದು ನಡೆಯಲಿದ್ದು, ಅಂದಿನವರೆಗೆ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ಆದೇಶಿಸಿದ್ದು, ಈ ಆದೇಶದಿಂದ ಡಾ.ವೈ.ಮಂಜುನಾಥ್ ಹಾಗೂ ಇತರ ಅರ್ಜಿದಾರರಿಗೆ ಸದ್ಯಕ್ಕೆ ತಾತ್ಕಾಲಿಕ ನಿರಾಳತೆ ದೊರೆತಿದೆ.



