ಮೈಸೂರು: ತಮಿಳುನಾಡಿಗೆ ನೀರು ಬಿಡದಂತೆ ಒತ್ತಾಯಿಸಿ ಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರ ಸಂಘದಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಖಾಲಿ ಕೊಡಗಳನ್ನಿಡಿದು ಪ್ರತಿಭಟನೆ ನಡೆಸಲಾಯಿತು.
ರಾಜ್ಯದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆಯ ಕೊರತೆಯಿಂದ ಜಲಾಶಯಗಳು ಇನ್ನೂ ಭರ್ತಿಯಾಗಿಲ್ಲ. ಇಂತಹ ಸಂದರ್ಭದಲ್ಲಿ ಕಾವೇರಿ, ಕಪಿಲ ನದಿಯಿಂದ ತಮಿಳುನಾಡಿಗೆ ೧೨,೦೦೦ ಕ್ಯೂಸೆಕ್ ನೀರನ್ನು ಪ್ರತಿದಿನ ಬಿಡುವಂತೆ ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರ ಆದೇಶ ನೀಡಿರುವುದು ಖಂಡನೀಯ ಎಂದು ಕಿಡಿ ಕಾರಿದರು.
ಸಂಘದ ಅಧ್ಯಕ್ಷ ಬಿ.ಎ.ಶಿವಶಂಕರ್ ಮಾತನಾಡಿ, ರಾಜ್ಯದ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಮುಂಗಾರು ಬೆಳೆಗೆ ನೀರನ್ನು ಉಳಿಸಿಕೊಳ್ಳುವ ಸಲುವಾಗಿ, ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಈ ಕೂಡಲೇ ನಿಲ್ಲಿಸಬೇಕು. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರದ್ದಾಗಬೇಕು. ಕಾವೇರಿ ನೀರಿನ ಹಕ್ಕನ್ನು ಕಾಪಾಡಲು ರಾಷ್ಟ್ರೀಯ ಜಲನೀತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಕಾವೇರಿ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿರುವ ತಮಿಳುನಾಡು ಸರ್ಕಾರ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ಗೆ ಧಿಕ್ಕಾರ. ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ನಿಲ್ಲಿಸಿ, ಮೇಕೆದಾಟು ಯೋಜನೆ ಜಾರಿಗೆ ಬರಲಿ, ಕಪಿಲಾ ಕಾವೇರಿ ನದಿಗಳಿಂದ ಮುಂಗಾರು ಮಳೆಗೆ ನೀರನ್ನು ಬಿಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹರದನಹಳ್ಳಿ ಬಸವರಾಜು, ದೂರ ಸುರೇಶ್, ಮಲ್ಲೇಶ್, ಸಿದ್ದರಾಜು, ವೃಷಭೇಂದ್ರ, ವೀರನಹಳ್ಳಿ, ಕುಮಾರ್, ಜಯಕುಮಾರ್, ಜಿಲ್ಲಾ ಕನ್ನಡ ಸೇನೆಯ ಅಧ್ಯಕ್ಷೆ ಶೈಲಜಾ, ಕನ್ನಡ ಚಳುವಳಿಗಾರರಾದ ಯಶೋದಾ, ದಾಕ್ಷಾಯಣಿ, ನಿಂಗಮ್ಮ, ಮೈತ್ರಿ ಹಾಗೂ ಮೊದಲಾದವರು ಇದ್ದರು.