ದಾವಣಗೆರೆ: ಜಿಲ್ಲೆಯ ನ್ಯಾಯಾಲಯದ ಆವರಣದಲ್ಲಿ ಸೆ.9ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ಕಕ್ಷಿದಾರರು ರಾಜೀ ಸಂಧಾನದ ಮೂಲಕ ತಮ್ಮ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ಸಮಯ ಹಾಗೂ ಹಣದ ಸದುಪಯೋಗಪಡಿಸಿಕೊಳ್ಳಬೇಕೆಂದು ಪ್ರಧಾನಜಿಲ್ಲಾ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ರಾಜೇಶ್ವರಿ.ಎನ್. ಹೆಗಡೆ ತಿಳಿಸಿದರು.
ಗುರುವಾರ(ಸೆ.7) ರಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಬಗ್ಗೆ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ರಾಷ್ಟ್ರೀಯ ಲೋಕ ಅದಾಲತ್ ಮೂಲಕ ಜಿಲ್ಲೆಯಲ್ಲಿನ ಅತಿ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿ ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಅವಕಾಶ ಕಲ್ಪಿಸಲಾಗಿದೆ. ಹಲವಾರು ಪ್ರಕರಣಗಳಲ್ಲಿ ನಾನೇ ಎಂಬ ಭಾವನೆಯಿಂದ ಕೆಲವೊಂದು ಪ್ರಕರಣಗಳು ವರ್ಷಗಟ್ಟಲೆ ನಡೆಯುತ್ತವೆ. ಇದರಿಂದ ಮನಸ್ಸುಗಳು, ಸಮಯ ಹಾಗೂ ಹಣ ವ್ಯರ್ಥವಾಗಲಿದ್ದು ಯಾವುದೇ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಸಂಬಂಧಿಸಿದ ವಕೀಲರುಗಳು, ಕಕ್ಷಿದಾರರು, ವಿಮಾ ಕಂಪನಿಗಳು ಸಹಕರಿಸಿ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳುವುದರಿಂದ ಸುಖಿ ಜೀವನ ನಡೆಸಬಹುದು.
ಜಿಲ್ಲೆಯ 25 ನ್ಯಾಯಾಲಯಗಳಲ್ಲಿ ಏಕಕಾಲಕ್ಕೆ ಸೆ. 9 ರಂದು ಲೋಕ್ ಅದಾಲತ್ ನಡೆಯಲಿದೆ. ಬಹುತೇಕ ಕೌಟುಂಬಿಕ ಪ್ರಕರಣಗಳು ಲೋಕ ಅದಾಲತ್ ಹಂತದಲ್ಲಿಯೇ ಇತ್ಯರ್ಥಪಡಿಸಲು ಸಾಧ್ಯವಿರುತ್ತದೆ. ಹಾಗೂ ಅಪಘಾತದ ಪ್ರಕರಣಗಳಿಗೂ ಇಲ್ಲಿ ಶೀಘ್ರ ಪರಿಹಾರ ಸಾಧ್ಯವಾಗುತ್ತದೆ. ಇಲ್ಲದಿದ್ದ ಪಕ್ಷದಲ್ಲಿ ವರ್ಷಾನುಗಟ್ಟಲೆ ಕಾಯಬೇಕಾಗುತ್ತದೆ. ಕೆಲವೊಂದು ಕ್ರಿಮಿನಲ್ ಕೇಸ್‍ಗಳು, ಜಾತಿನಿಂದನೆ ಪ್ರಕರಣ, ಪೋಕ್ಸೊ ಕಾಯ್ದೆ ಅಡಿಯ ಪ್ರಕರಣಗಳು ಇತ್ಯರ್ಥವಾಗುವುದಿಲ್ಲ. ಇಂತಹವುಗಳನ್ನು ಹೊರತುಪಡಿಸಿ ಸಿವಿಲ್ ದಾವೆಗಳಾದ ಜೀವನಾಂಶ, ವಿಚ್ಚೇದನ, ಭೂಸ್ವಾಧೀನ ಇಂತಹ ಪ್ರಕರಣಗಳ ಕಕ್ಷಿದಾರರನ್ನು ಮುಖಾಮುಖಿ ಕೂರಿಸಿ ಪರಿಹಾರ ಕಂಡು ಕೊಳ್ಳಬಹುದಾಗಿದೆ.
ಜಿಲ್ಲೆಯಾದ್ಯಂತ 39157 ಪ್ರಕರಣಗಳು ಬಾಕಿ ಇದ್ದು, ಇದರಲ್ಲಿ ಸೆ.9 ರಂದು ಸುಮಾರು 5400 ಇಂತಹ ಪ್ರಕರಣಗಳನ್ನು ಇತ್ಯರ್ಥಪಡಿಸಲು ಗುರುತಿಸಲಾಗಿದೆ. ಕನಿಷ್ಠ 4 ರಿಂದ 5 ಸಾವಿರ ಇಂತಹ ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದ್ದು ಇದಕ್ಕೆ ವಿವಿಧ ಇಲಾಖೆಗಳ ಸಹಕಾರ ಅಗತ್ಯವೆಂದರು.
ನ್ಯಾಯಾಲಯದಲ್ಲಿ ದಾಖಲಾಗದಿರುವ ಪ್ರಕರಣಗಳನ್ನು (ವ್ಯಾಜ್ಯಪೂರ್ವ ಪ್ರಕರಣಗಳು) ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಂತಹ ಪ್ರಕರಣಗಳಾದ ಚೆಕ್ ಅಮಾನ್ಯ ಪ್ರಕರಣ, ಭೂಸ್ವಾಧೀನ ಪರಿಹಾರ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಎಂ.ಎಂ.ಡಿ.ಆರ್ ಕಾಯ್ದೆಯಡಿಯ ಪ್ರಕರಣಗಳು, ಕಾರ್ಮಿಕ ವಿವಾದಗಳು, ಕೈಗಾರಿಕಾ ಕಾರ್ಮಿಕ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ರಾಜೀಯಾಗಬಲ್ಲ ಅಪರಾಧಿಕ ಪ್ರಕರಣಗಳು, ವೈವಾಹಿಕ ಕುಟುಂಬ ನ್ಯಾಯಾಲಯ ಹಾಗೂ ಇತರೆ ಸಿವಿಲ್ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಬಗೆಹರಿಸಿಕೊಳ್ಳಬಹುದು.
ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಎಲ್.ಎಚ್. ಅರುಣ್‍ಕುಮಾರ್ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರಕರಣ ಇತ್ಯರ್ಥ ಪಡಿಸಿರುವ ಕಾರಣಕ್ಕೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ, ನ್ಯಾಯಮೂರ್ತಿ ನರೇಂದ್ರ ಅವರು ಅಭಿನಂದನಾ ಪತ್ರ ನೀಡಿರುವುದು ಸಂತೋಷದ ಸಂಗತಿ. ಲೋಕ್ ಅದಾಲತ್ ಯಶಸ್ವಿಯಾಗಿ ನಡೆಯಲು ಎಲ್ಲರ ಪಾತ್ರವೂ ಅತೀ ಪ್ರಮುಖ ಎಂದು ತಿಳಿಸಿದರು.
ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ. ಬಸವರಾಜ್, ಕಾರ್ಯದರ್ಶಿ ಎಸ್. ಬಸವರಾಜ್, ಸಹ ಕಾರ್ಯದರ್ಶಿ ಮಂಜುನಾಥ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.