ಚಿತ್ರದುರ್ಗ: ವಿವಿಧ ವೃತ್ತಿ ಆಧಾರಿತ ಕುಶಲಕರ್ಮಿಗಳಿಗೆ ಆರ್ಥಿಕ ನೆರವು ನೀಡಲು ಜಾರಿಗೊಂಡಿರುವ ಪಿ.ಎಂ. ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯಾದ್ಯಂತ ವಾರದಲ್ಲಿ ಕನಿಷ್ಟ 10 ಸಾವಿರ ಫಲಾನುಭವಿಗಳನ್ನು ನೊಂದಣಿ ಮಾಡಿಸಬೇಕು, ಸಾಮಾನ್ಯ ಸೇವಾ ಕೇಂದ್ರದಲ್ಲಿ ಅರ್ಜಿ ನೋಂದಣಿ ಉಚಿತವಾಗಿದ್ದು, ಇದಕ್ಕಾಗಿ ಸೇವಾ ಕೇಂದ್ರಗಳಲ್ಲಿ ಹಣ ಪಡೆದರೆ ಅಂತಹವರ ವಿರುದ್ಧ ಕಠಿಣ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಪಿ.ಎಂ. ವಿಶ್ವಕರ್ಮ ಯೋಜನೆಯ ಕುರಿತ ಜಿಲ್ಲಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿವಿಧ ವೃತ್ತಿ ಆಧಾರಿತ ಕುಶಲಕರ್ಮಿಗಳು, ಅಸಂಘಟಿತ ಕಾರ್ಮಿಕ ವರ್ಗದವರೂ ಸೇರಿದಂತೆ ನಾನಾ ವೃತ್ತಿಗಳಲ್ಲಿ ತೊಡಗಿರುವ ಶ್ರಮಿಕ ವರ್ಗದವರಿಗೆ ಪಿ.ಎಂ.ವಿಶ್ವಕರ್ಮ ಯೋಜನೆಯಡಿ ಬಡಗಿ, ದೋಣಿ ತಯಾರಿಕೆ, ಶಸ್ತ್ರ ತಯಾರಿಕೆ, ಕಮ್ಮಾರಿಕೆ, ಕಲ್ಲುಕುಟಿಗ, ಬಟ್ಟೆ, ಚಾಪೆ-ಕಸಪರಕೆ ತಯಾರಕರು, ಗೊಂಬೆ ಮತ್ತು ಆಟಿಕೆ ತಯಾರಿಕೆ, ಕ್ಷೌರಿಕ ವೃತ್ತಿ, ಸುತ್ತಿಗೆ ಮತ್ತು ಉಪಕರಣಗಳ ತಯಾರಿಕೆ, ಹೂಮಾಲೆ ತಯಾರಿಕೆ, ಅಗಸರು (ದೋಬಿ) ಆಭರಣ ತಯಾರಿಕೆ, ಟೈಲರಿಂಗ್, ಕುಂಬಾರಿಕೆ, ಮೀನು ಬಲೆ ಹೆಣೆಯುವವರು, ಮೂರ್ತಿ ಮತ್ತು ಕಲ್ಲಿನ ಕೆತ್ತನೆ ಮಾಡುವ ಶಿಲ್ಪಿಗಳು, ಚಮ್ಮಾರರು, ಪಾದರಕ್ಷೆ ತಯಾರಕರು, ಬೀಗ ತಯಾರಿಕೆ ಸೇರಿದಂತೆ ವಿವಿಧ ಬಗೆಯ ವೃತ್ತಿ ಮಾಡುವವರು, ತಮ್ಮ ವೃತ್ತಿ ಸುಧಾರಣೆಗೆ ಅಗತ್ಯವಿರುವ ಉಪಕರಣಗಳನ್ನು ಖರೀದಿಸಲು ಬಡತನ ಅಡ್ಡಿಯಾಗಿರುತ್ತದೆ, ಇಂತಹವರೆಲ್ಲರಿಗೂ ಆರ್ಥಿಕ ಸಹಾಯ ನೀಡುವ ಸಲುವಾಗಿ ಸರ್ಕಾರದಿಂದ ಪಿ.ಎಂ. ವಿಶ್ವಕರ್ಮ ಯೋಜನೆ ಜಾರಿಗೊಳಿಸಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರು ಹೆಚ್ಚಿರುವ ಹಾಗೂ ಆರ್ಥಿಕವಾಗಿ ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿರುವ ಚಿತ್ರದುರ್ಗ ಜಿಲ್ಲೆಗೆ ಈ ಯೋಜನೆ ನಿಜಕ್ಕೂ ಅತ್ಯಂತ ಸಹಕಾರಿಯಾಗಿದೆ. ವಿಶೇಷವೆಂದರೆ ಸರ್ಕಾರದಿಂದ ಫಲಾನುಭವಿಗಳ ಆಯ್ಕೆಗೆ ಯಾವುದೇ ಗುರಿ ನಿಗದಿ ಮಾಡಿಲ್ಲ ಹಾಗೂ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಬೇಕು ಎನ್ನುವ ಯಾವುದೇ ಮಾನದಂಡ ಇಲ್ಲ. ಹೆಚ್ಚು ಹೆಚ್ಚು ಜನರು ಯೋಜನೆಗೆ ನೊಂದಣಿ ಮಾಡಿಕೊಳ್ಳುವ ಮೂಲಕ ಇದರ ಲಾಭ ಪಡೆದುಕೊಳ್ಳುವಂತೆ ಆಗಬೇಕು ಎಂದರು.
ನೊಂದಣಿ ವಿಧಾನ ಸರಳ: ಯೋಜನೆ ಕುರಿತು ಮಾಹಿತಿ ನೀಡಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ. ಆನಂದ್ ಅವರು, ಪಿ.ಎಂ. ವಿಶ್ವಕರ್ಮ ಯೋಜನೆಯ ಲಾಭ ಪಡೆಯಲು ಕುಶಲಕರ್ಮಿಗಳು https: //pmvishwakarma.gov.in ವೆಬ್‍ಸೈಟ್ ಮೂಲಕ ಅಥವಾ ಸ್ಥಳೀಯ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ನೋಂದಾಯಿಸಿಕೊಳ್ಳಬಹುದು. ಅರ್ಜಿ ಸಲ್ಲಿಕೆಗೆ ಆಧಾರ್ ಕಾರ್ಡ್, ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಪಾಸ್ ಬುಕ್ ಹಾಗೂ ಮೊಬೈಲ್ ಸಂಖ್ಯೆ ಇದಿಷ್ಟಿದ್ದರೆ ಸಾಕು, ನೊಂದಣಿ ಮಾಡಿಕೊಳ್ಳಲು. ನೋಂದಣಿ ನಂತರದ ಹಂತದಲ್ಲಿ ಅರ್ಜಿ ಸಲ್ಲಿಸಿದವರ ವೃತ್ತಿ ಕುರಿತಾಗಿ ಆಯಾ ಗ್ರಾಮ ಪಂಚಾಯತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ವೆಬ್‍ಪೋರ್ಟಲ್‍ನಲ್ಲಿ ದೃಢೀಕರಣ ನೀಡುವರು. ಈ ಎಲ್ಲಾ ಪ್ರಕ್ರಿಯೆಗಳು ಆನ್ ಲೈನ್ ಮೂಲಕ ನಡೆಯಲಿವೆ. ಗ್ರಾಮ ಪಂಚಾಯತಿ ಅಧ್ಯಕ್ಷರ ಲಾಗಿನ್ ಐಡಿ ಸೃಜನೆ ಮಾಡಲಾಗಿದ್ದು, ತರಬೇತಿ ನೀಡಲಾಗುವುದು. ಈಗಾಗಲೆ ಕಾರ್ಮಿಕ ಇಲಾಖೆಯ ಇ-ಶ್ರಮ ಪೋರ್ಟಲ್‍ನಲ್ಲಿ ಲಭ್ಯವಿರುವ ಜಿಲ್ಲೆಯ 18,923 ಜನರನ್ನು ಯೋಜನೆಯಡಿ ನೊಂದಣಿಗೆ ಕ್ರಮ ವಹಿಸಲಾಗಿದೆ ಎಂದರು.