Wednesday, May 21, 2025
Google search engine

Homeರಾಜ್ಯಸುದ್ದಿಜಾಲಜನರ ಸಮಸ್ಯೆ ತ್ವರಿತ ಪರಿಹಾರಕ್ಕೆ ಅನುಕೂಲ: ಶಾಸಕ ವಿಠ್ಠಲ್ ಹಲಗೇಕರ್

ಜನರ ಸಮಸ್ಯೆ ತ್ವರಿತ ಪರಿಹಾರಕ್ಕೆ ಅನುಕೂಲ: ಶಾಸಕ ವಿಠ್ಠಲ್ ಹಲಗೇಕರ್

ಬೆಳಗಾವಿ: ರಸ್ತೆ, ಗಟಾರು, ವಿದ್ಯುತ್, ಕುಡಿಯುವ ನೀರು, ಆರೋಗ್ಯದಂತಹ ಮೂಲಭೂತ ಸಮಸ್ಯೆಗಳನ್ನು ಸ್ಥಳೀಯವಾಗಿ ತಕ್ಷಣವೇ ಪರಿಹರಿಸುವುದು ತಾಲ್ಲೂಕುಮಟ್ಟದ “ಜನತಾ ದರ್ಶನ” ಕಾರ್ಯಕ್ರಮದ ಉದ್ಧೇಶವಾಗಿದೆ. ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಖಾನಾಪುರ ಶಾಸಕ ವಿಠ್ಠಲ ಹಲಗೇಕರ್ ಅವರು ಕರೆ ನೀಡಿದರು.

ಖಾನಾಪುರ ತಾಲ್ಲೂಕಿನ ನಂದಗಡದ ಟಿಎಪಿಸಿಎಂಎಸ್ ಕಲ್ಯಾಣಮಂಟಪದಲ್ಲಿ ಬುಧವಾರ(ಅ.18) ಏರ್ಪಡಿಸಲಾಗಿದ್ದ “ಜನತಾ ದರ್ಶನ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜನರ ಸಮಸ್ಯೆಗಳನ್ನು ಸ್ಥಳೀಯವಾಗಿ ಬಗೆಹರಿಸುವುದು ಜನತಾ ದರ್ಶನದ ಉದ್ಧೇಶ. ಜನರು ತಮ್ಮ ಅಹವಾಲುಗಳನ್ನು ಪರಿಹರಿಸಲು ಜಿಲ್ಲಾ ಕೇಂದ್ರಕ್ಕೆ ಅಲೆದಾಡುವುದನ್ನು ತಪ್ಪಿಸಬಹುದು. ರಸ್ತೆ, ಗಟಾರು, ವಿದ್ಯುತ್, ಕುಡಿಯುವ ನೀರು, ಆರೋಗ್ಯದಂತಹ ಸಮಸ್ಯೆಗಳನ್ನು ತಾಲ್ಲೂಕುಮಟ್ಟದಲ್ಲಿಯೇ ಬಗೆಹರಿಸಲು ಸಾಧ್ಯವಾಗಲಿದೆ.

ಜಿಲ್ಲಾ ಪಂಚಾಯತಿ, ಕಂದಾಯ, ಅರಣ್ಯ ಸೇರಿದಂತೆ ಎಲ್ಲ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಒಂದೇ ಸ್ಥಳದಲ್ಲಿ ಲಭ್ಯವಿರುವುದರಿಂದ ಜನರು ಸಮಸ್ಯೆಗಳನ್ನು ತಿಳಿಸಲು ಹಾಗೂ ಅವುಗಳನ್ನು ಬಗೆಹರಿಸುವುದು ಸಾಧ್ಯವಾಗಲಿದೆ. ಸಾರ್ವಜನಿಕರುಬಿದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ವಿಠ್ಠಲ ಹಲಗೇಕರ್ ಅವರು ಹೇಳಿದರು. ಹತ್ತು ವರ್ಷಗಳ ಬಳಿಕ ಖಾನಾಪುರ ತಾಲ್ಲೂಕಿನಲ್ಲಿ ಜನತಾದರ್ಶನ ಹಮ್ಮಿಕೊಳ್ಳಲಾಗಿದೆ.

ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಿಂಗಳಿಗೊಮ್ಮೆ ಹಾಗೂ ಹದಿನೈದು ದಿನಕ್ಕೊಮ್ಮೆ ತಾಲ್ಲೂಕಿನಲ್ಲಿ ಜನತಾ ದರ್ಶನ ನಡೆಸಲಾಗುತ್ತಿದೆ.ತಾಲ್ಲೂಕುಮಟ್ಟದ ಪ್ರಥಮ ಕಾರ್ಯಕ್ರಮಕ್ಕೆ ಖಾನಾಪುರ ಆಯ್ಕೆ ಮಾಡಿಕೊಂಡಿರುವುದಕ್ಕೆ ಶಾಸಕ ವಿಠ್ಠಲ ಹಲಗೇಕರ್ ಅವರು ಕೃತಜ್ಞತೆ ಸಲ್ಲಿಸಿದರು.

ಜಿಲ್ಲಾಧಿಕಾರಿಗಳ ಬಸ್ ಪ್ರಯಾಣ: ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಸ್ಥಳೀಯವಾಗಿಯೇ ಸಮಸ್ಯೆಗಳನ್ನು ಪರಿಹರಿಸಲು ಅನುಕೂಲವಾಗುವಂತೆ ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ಇಂದು (ಅ.18) ಹಮ್ಮಿಕೊಳ್ಳಲಾಗಿರುವ “ಜನತಾ ದರ್ಶನ” ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡವು ಸಾರಿಗೆ ಸಂಸ್ಥೆಯ ಬಸ್ ನಲ್ಲಿ ನಂದಗಡಕ್ಕೆ ಪ್ರಯಾಣಿಸಿತು. ಮಹಿಳಾ ಅಧಿಕಾರಿಗಳು ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸಿದರೆ ಜಿಲ್ಲಾಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ಟಿಕೆಟ್ ಪಡೆದುಕೊಂಡು ತೆರಳಿದರು. ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular