ಮೈಸೂರು: ಶಿಕ್ಷಣದಿಂದ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗಿದ್ದು ಹಾಸ್ಟೆಲ್‌ಗೆ ಬರುವ ವಿದ್ಯಾರ್ಥಿಗಳೆಲ್ಲಾ ಗ್ರಾಮೀಣ ಭಾಗದಿಂದ ಬರುತ್ತಿದ್ದು ಅವರಿಗೆ ಉತ್ತಮ ಆಹಾರ ನೀಡುವುದರ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಿ ವಿಶೇಷ ತರಬೇತಿಗಳನ್ನು ನೀಡಿ ಮಕ್ಕಳನ್ನು ರ್‍ಯಾಂಕ್ ಬರುವಂತೆ ತಯಾರು ಮಾಡಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಯೋಜನಾ ಇಲಾಖೆಯ ಪ್ರದೇಶಾಭಿವೃದ್ಧಿ ಮಂಡಳಿಯ ಯೋಜನಾ ನಿರ್ದೇಶಕರಾದ ಡಿ. ಚಂದ್ರಶೇಖರಯ್ಯ ತಿಳಿಸಿದರು.
ನಜ಼ರ್‌ಬಾದ್‌ನಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದಲ್ಲಿ ನಡೆದ ಮೈಸೂರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವಾರ್ಡನ್‌ಗಳ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ಬಹಳ ಹಿಂದಿನಿಂದ ವಾರ್ಡನ್‌ಗಳಿಗೆ ಬಡ್ತಿ ಸಿಕ್ಕಿಲ್ಲ ಎಂದಿದ್ದೀರಿ ನಿಮ್ಮ ಸಮಸ್ಯೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾತನಾಡಿ ಪರಿಹರಿಸಿ ಕೊಡುವುದಾಗಿ ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ. ರಂಗೇಗೌಡ ಮಾತನಾಡಿ ಬೇರೆ ಜಿಲ್ಲೆಯ ಹಾಸ್ಟೆಲ್‌ಗಳಿಗೆ ಹೋಲಿಸಿದರೆ ಮೈಸೂರು ಜಿಲ್ಲೆಯ ಹಾಸ್ಟೆಲ್‌ಗಳು ಉತ್ತಮವಾಗಿವೆ. ಮಕ್ಕಳನ್ನು ನಿಮ್ಮ ಮಕ್ಕಳೆಂದು ತಿಳಿದು ಸ್ವಯಂ ವಿಮರ್ಶೆ ಮಾಡಿಕೊಂಡು ಕೆಲಸ ಮಾಡಿ ಒಬ್ಬರೆ ಎಲ್ಲವನ್ನು ಮಾಡಲು ಆಗುವುದಿಲ್ಲ ನಿಮ್ಮ ಸಹಕಾರವು ನಮಗೆ ಬೇಕು, ನಿಮ್ಮ ಸಂಘದಿಂದ ಕಾರ್ಯಾಗಾರಗಳನ್ನು ಮಾಡಿ ಆರೋಗ್ಯ ತಪಾಸಣೆ ಶಿಬಿರ ಮಾಡಿ ಕೇಂದ್ರ ಕಛೇರಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿರಿ. ನಾನು ನಿಮಗೆ ಯಾವುದೇ ತೊಂದರೆ ಕೊಡುವುದಿಲ್ಲ ನಿರ್ಭಯವಾಗಿ ಕೆಲಸ ಮಾಡಿ ಎಂದರು.
ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣಾಧಿಕಾರಿ ಎನ್. ಮುನಿರಾಜು ಮಾತನಾಡಿ ಇಡೀ ದೇಶದಲ್ಲಿಯೇ ಪ್ರಥಮವಾಗಿ ಮೀಸಲಾತಿ ಕೊಟ್ಟವರು ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಎಲ್ಲಾ ಹೋರಾಟಗಳು ಮೈಸೂರಿನಿಂದಲೇ ಪ್ರಾರಂಭವಾಗಿ ಯಶಸ್ವಿಯಾಗಿವೆ. ಮೊದಲು ಸಂಘಟನೆಯ ಮಹತ್ವವನ್ನು ತಿಳಿದುಕೊಂಡು ಸಂಘಟನೆಯನ್ನು ಗಟ್ಟಿಗೊಳಿಸಿ ಹೋರಾಟ ಮಾಡಿ ನಿಮ್ಮ ಸಮಸ್ಯೆ ಪರಿಹರಿಸಿಕೊಳ್ಳಿ. ಹಾಸ್ಟೆಲ್‌ನಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾದಂತೆ ಸಿಬ್ಬಂದಿ ಸಂಖ್ಯೆಯು ಹೆಚ್ಚಾಗಬೇಕು. ಬಡ್ತಿಯೇ ಇಲ್ಲದೇ ಕೆಲಸ ಮಾಡುತ್ತಿದ್ದೀರಿ, ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಮಂತ್ರಿಗಳಿದ್ದಾರೆ, ಆಯುಕ್ತರಿದ್ದಾರೆ. ನಿಮ್ಮ ಹಕ್ಕುಗಳನ್ನು ನೀವು ಕೇಳಿ ಹೋರಾಟ ಮಾಡಿ ಪಡೆಯಿರಿ ಎಂದರು. ಸಮಾರಂಭದಲ್ಲಿ ಸಹಾಯಕ ನಿರ್ದೇಶಕ ಸಿದ್ದಲಿಂಗು ಕೆ., ಜಿಲ್ಲಾ ವಾರ್ಡನ್ ಸಂಘದ ಅಧ್ಯಕ್ಷ ಜಿ. ಶಿವಮಲ್ಲಯ್ಯ, ಗೌರವ ಅಧ್ಯಕ್ಷ ಮಹಾದೇವಮೂರ್ತಿ, ಉಪಾಧ್ಯಕ್ಷೆ ಪವಿತ್ರ, ಕಾರ್ಯದರ್ಶಿ ನಂದೀಶ್ ಹಾಗೂ ಎಲ್ಲಾ ನಿಲಯಪಾಲಕರು ಹಾಜರಿದ್ದರು.