ಮಂಗಳೂರು (ದಕ್ಷಿಣ ಕನ್ನಡ): ಬೈಂದೂರು ತಾಲೂಕು ನಾಡ, ಹಡವು, ಬಡಾಕೆರೆ, ಕೊಲ್ಲೂರು, ಕುಂದಾಪುರ ತಾಲೂಕು ಆಲೂರು, ಹಕ್ಲಾಡಿ, ಗುಲ್ವಾಡಿ ಗ್ರಾಮಗಳಿಗೆ ಸರಕಾರಿ ಬಸ್ಸು ಸೇವೆ ಒದಗಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಡಿವೈಎಫ್ಐ, ಜನವಾದಿ ಮಹಿಳಾ ಸಂಘಟನೆ, ಸಿಐಟಿಯು ನೇತೃತ್ವದಲ್ಲಿ ಮಂಗಳೂರಿನ ಬಿಜೈನಲ್ಲಿರುವ KSRTC ವಿಭಾಗೀಯ ಕಚೇರಿ (ಬಸ್ಸು ನಿಲ್ದಾಣ) ಮುಂಭಾಗ ಪ್ರತಿಭಟನಾ ಪ್ರದರ್ಶನ ನಡೆಸಿದರು. ಕಳೆದ ನಾಲ್ಕು ತಿಂಗಳಿನಿಂದ ಗ್ರಾಮ ಪಂಚಾಯತ್ ಮುಂಭಾಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದರೂ ಬೇಡಿಕೆ ಈಡೇರದೆ ಇರುವುದರಿಂದ ಇಂದು ನೂರು ಕಿಮೀ ಗೂ ಹೆಚ್ಚು ದೂರ ಇರುವ ಮಂಗಳೂರಿನ ವಿಭಾಗೀಯ ಕಚೇರಿ ಮುಂಭಾಗ ಬಂದು ಪ್ರತಿಭಟನೆ ನಡೆಸಿದರು.
ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಕ್ತಿ ಯೋಜನೆಯ ಫಲ ತಮಗೆ ಸಿಗದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಗಳಲ್ಲಿ ಸರಕಾರಿ, ಖಾಸಗಿ ಬಸ್ಸುಗಳು ಓಡಾಡದೆ ಇರುವುದರಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜು ತಲುಪಲು, ಕಾರ್ಮಿಕರು, ನೌಕರರು ಉದ್ಯೋಗದ ಸ್ಥಳಗಳಿಗೆ ಸಮಯಕ್ಕೆ ಸರಿಯಾಗಿ ತಲುಪದೆ ಅನುಭವಿಸುತ್ತಿರುವ ಕಷ್ಟಗಳನ್ನು KSRTC ಅಧಿಕಾರಿಗಳ ಮುಂದೆ ಬಿಚ್ಚಿಟ್ಟರು. ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಸ್ಥಳಕ್ಕೆ ಬಂದು ಅಹವಾಲು ಆಲಿಸಿ, ಮನವಿ ಸ್ವೀಕರಿಸಿದರು. ಶೀಘ್ರವೇ ಗ್ರಾಮಗಳಿಗೆ ಭೇಟಿ ನೀಡಿ ಪರಿಹಾರ ಒದಗಿಸಲು ಯತ್ನಿಸುವುದಾಗಿ ತಿಳಿಸಿದರು, ಈಗಾಗಲೆ RTO ಗೆ ಮೇಲ್ಕಂಡ ಗ್ರಾಮಗಳಿಗೆ ಬಸ್ ಓಡಿಸಲು KSRTC ಗೆ ಪರ್ಮಿಟ್ ಒದಗಿಸಲು ಪತ್ರ ಬರೆದಿರುವುದಾಗಿ ತಿಳಿಸಿದರು.
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವಿ, ನಾಡ ಗ್ರಾಮ ಪಂಚಾಯತ್ ಸದಸ್ಯ, ಕಾರ್ಮಿಕ ನಾಯಕ ರಾಜು ಪಡುಕೋಣೆ, ಸಿಪಿಐಎಂ ಹಿರಿಯ ನೇತಾರ ಕೆ ಶಂಕರ್, ವೆಂಕಟೇಶ ಕೋಣಿ, ಸ್ಥಳೀಯ ಪ್ರಮುಖರಾದ ರಾಜೇಶ್ ಪಡುಕೋಣೆ, ನಾಗರತ್ನ ನಾಡ, ಶೀಲಾವತಿ ಹಡವು, ಗ್ರಾಪಂ ಸದಸ್ಯೆ ಶೋಭಾ, ನಿಸರ್ಗ ಪಡುವರಿ, ನಿಸರ್ಗ ಪಡುಕೋಣೆ, ಬಲ್ಕೀಸ್ ಕುಂದಾಪುರ, ರೊನಾಲ್ಡ್ ರಾಜೇಶ್ ಬೈಂದೂರು, ಡಿವೈಎಫ್ಐ ದಕ ಜಿಲ್ಲಾ ಮುಖಂಡರಾದ ಬಿಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಮನೋಜ್ ವಾಮಂಜೂರು, ರಿಜ್ವಾನ್ ಹರೇಕಳ, ಮಾಜಿ ಕಾರ್ಪೊರೇಟರ್ ಜಯಂತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
