Wednesday, May 21, 2025
Google search engine

Homeರಾಜಕೀಯಕೆಪಿಎಸ್ಸಿ ಪರೀಕ್ಷೆಯಲ್ಲಿ ಮಹಿಳಾ ಅಭ್ಯರ್ಥಿಗಳ ಮಂಗಳಸೂತ್ರ, ಕಾಲುಂಗುರ ತೆಗೆಸಿದ್ದು ದುರ್ನಡತೆಯ ಪರಮಾವಧಿ: ಆದೇಶ ಕೊಟ್ಟ ಅಧಿಕಾರಿಗಳ...

ಕೆಪಿಎಸ್ಸಿ ಪರೀಕ್ಷೆಯಲ್ಲಿ ಮಹಿಳಾ ಅಭ್ಯರ್ಥಿಗಳ ಮಂಗಳಸೂತ್ರ, ಕಾಲುಂಗುರ ತೆಗೆಸಿದ್ದು ದುರ್ನಡತೆಯ ಪರಮಾವಧಿ: ಆದೇಶ ಕೊಟ್ಟ ಅಧಿಕಾರಿಗಳ ಅಮಾನತಿಗೆ ಜೆಡಿಎಸ್ ಆಗ್ರಹ

ಬೆಂಗಳೂರು: ಕಲಬುರಗಿಯಲ್ಲಿ ಭಾನುವಾರ ನಡೆದ ಕೆಪಿಎಸ್ಸಿಯ ಗ್ರೂಪ್ ಸಿ ಹುದ್ದೆಗಳ ಪ್ರವೇಶ ಪರೀಕ್ಷೆಯ ವೇಳೆ ವಿವಾಹಿತ ಮಹಿಳಾ ಅಭ್ಯರ್ಥಿಗಳ ಮಂಗಳಸೂತ್ರ, ಕಾಲುಂಗುರ ತೆಗೆದಿದ್ದು ದುರ್ನಡತೆ ಪರಮಾವಧಿ ಎಂದು ಜಾತ್ಯತೀತ ಜನತಾದಳ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಜೆಡಿಎಸ್; ಗ್ರೂಪ್ ಸಿ ಹುದ್ದೆಗಳ ಪ್ರವೇಶ ಪರೀಕ್ಷೆಯ ವೇಳೆ ಮಹಿಳೆಯರ ಮಂಗಳಸೂತ್ರ, ಕಾಲುಂಗುರ ತೆಗೆಸಿರುವ ಘಟನೆ ಅಕ್ಷಮ್ಯ. ಇದು ಸ್ತ್ರೀಯರ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನ. ನಾವು ಕರ್ನಾಟಕದಲ್ಲಿ ಇದ್ದೇವೆಯೋ? ಅಥವಾ ಇನ್ನೆಲ್ಲಾದರೂ ಇದ್ದೇವೆಯೋ? ಎಂದು ಕಿಡಿಕಾರಿದೆ.

ಕಲಬುರಗಿಯಲ್ಲಿ ಭಾನುವಾರ ನಡೆದ ಕೆಪಿಎಸ್ಸಿ ಪರೀಕ್ಷೆಯಲ್ಲಿ ಸ್ತ್ರೀಯರಿಗೆ ಘೋರ ಅಪಮಾನ ಎಸಗಿದ್ದು ಅತ್ಯಂತ ಖಂಡನೀಯ. ಇಂಡಿಯಾ ಎಂದು ಜಪಿಸುವ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಭಾರತದ ಸಂಸ್ಕೃತಿಗೆ ಸಿಕ್ಕ ಗೌರವ ಇದು. ನಮ್ಮ ಸಂಸ್ಕೃತಿ, ಪರಂಪರೆಯನ್ನು ನಿರ್ನಾಮ ಮಾಡುವ ಕುಕೃತ್ಯ ಅವರಿಂದ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಜೆಡಿಎಸ್ ಕಟುವಾಗಿ ಟೀಕಿಸಿದೆ.

ಒಂದೆಡೆ ಗೃಹಲಕ್ಷ್ಮಿ ಎನ್ನುವ ರಾಜ್ಯ ಸರಕಾರ, ಇನ್ನೊಂದೆಡೆ ಅದೇ ಗೃಹಲಕ್ಷ್ಮಿಯರ ಸೌಭಾಗ್ಯ ಮತ್ತು ಸಾಂಸ್ಕೃತಿಕ, ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟು ಮಾಡುತ್ತಿದೆ. ಕರ್ನಾಟಕ ಮಾದರಿ ಎಂದರೆ ತಾಯಂದಿರ ಮುತ್ತೈದೆತನಕ್ಕೇ ಕುತ್ತು ತರುವುದಾ? ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇಷ್ಟಕ್ಕೂ ಪರೀಕ್ಷಾ ಸಿಬ್ಬಂದಿಗೆ ಮಹಿಳಾ ಅಭ್ಯರ್ಥಿಗಳ ತಾಳಿ, ಕಾಲುಂಗುರ ತೆಗೆಸುವಂತೆ ಆದೇಶ ಕೊಟ್ಟವರು ಯಾರು? ಅವರಿಗೆ ಅಷ್ಟೊಂದು ಸೂಕ್ಷ್ಮಪ್ರಜ್ಞೆಯ ಕೊರತೆಯೇ? ಪರೀಕ್ಷೆಗೆ ಮೊದಲೇ ಆ ಮಹಿಳೆಯರಿಗೆ ಅದೆಷ್ಟು ಮಾನಸಿಕ ಆಘಾತ ಉಂಟಾಗುತ್ತದೆ ಎಂಬ ಅರಿವು ಬೇಡವೇ? ಪರೀಕ್ಷಾ ನಿಯಮಗಳ ಪಟ್ಟಿಯಲ್ಲಿ ಕಾಲುಂಗುರ, ಮಂಗಳಸೂತ್ರ ತೆಗೆಯಬೇಕು ಎನ್ನುವ ಸೂಚನೆಯೇ ಇರಲಿಲ್ಲ ಎನ್ನುತ್ತಾರೆ ಪರೀಕ್ಷಾರ್ಥಿಗಳು. ಹಾಗಾದರೆ, ಪರೀಕ್ಷಾ ಕೇಂದ್ರಕ್ಕೆ ಬಂದ ವಿವಾಹಿತ ಮಹಿಳಾ ಅಭ್ಯರ್ಥಿಗಳ ಮಂಗಳಸೂತ್ರ, ಕಾಲುಂಗುರವನ್ನು ಬಲವಂತವಾಗಿ ತೆಗೆಸಿದ್ದು ದುರ್ನಡತೆತ ಪರಮಾವಧಿ ಎಂದು ಜೆಡಿಎಸ್ ಕೆಂಡ ಕಾರಿದೆ.

ಕೆಪಿಎಸ್ಸಿ ಹಾಗೂ ರಾಜ್ಯ ಸರಕಾರ ಕೂಡಲೇ ನೊಂದ ಮಹಿಳೆಯರ ಕ್ಷಮೆ ಯಾಚಿಸಬೇಕು ಹಾಗೂ ಇಂಥ ಆಘಾತಕಾರಿ ಘಟನೆಗೆ ಕಾರಣರಾದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು. ಮತ್ತೆಂದೂ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಜೆಡಿಎಸ್ ಒತ್ತಾಯ ಮಾಡಿದೆ.

RELATED ARTICLES
- Advertisment -
Google search engine

Most Popular