ಎಚ್.ಡಿ.ಕೋಟೆ: ಹಾಡಹಗಲೇ ಒಂಟಿ ಮಹಿಳೆ ವಾಸವಿದ್ದ ಮನೆಗೆ ನುಗ್ಗಿ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವೀರಭದ್ರಪ್ಪ ಅವರ ಪತ್ನಿ ಗಾಯಿತ್ರಿ (೪೮) ಹತ್ಯೆಯಾದ ಮಹಿಳೆ. ಮಾದಾಪುರ ಗ್ರಾಮದಲ್ಲಿ ವಾಸವಿದ್ದ ಗಾಯಿತ್ರಿ ಅವರನ್ನು ಹಬ್ಬಕ್ಕೆ ಕರೆತರಲು ಹಿರೇನಂದಿ ಗ್ರಾಮದಲ್ಲಿದ್ದ ಗಾಯತ್ರಿ ಸಹೋದರಿ ಮಾದಪುರಕ್ಕೆ ಬಂದಿದ್ದಾರೆ. ಈ ವೇಳೆ ಗಾಯಿತ್ರಿ ಕೊಲೆಯಾಗಿರುವುದು ತಿಳಿದುಬಂದಿದೆ. ಕೊಲೆಯಾಗಿರುವುದನ್ನು ಕಂಡ ಗಾಯತ್ರಿ ಸಹೋದರಿ ಆತಂಕಗೊಂಡು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಚಂದ್ರಮೌಳೇಶ್ವರ ಮಲ್ಲಿಕಾರ್ಜುನ ಬೆಟ್ಟದಲ್ಲಿ ಅಮಾವಾಸ್ಯೆಯ ಪೂಜೆಗೆ ತೆರಳಿದ್ದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಎಚ್.ಡಿ.ಕೋಟೆ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೈಸೂರಿನ ಶ್ವಾನದಳದ ಸಹಾಯ ಪಡೆದು ತನಿಖೆ ಕೈಗೊಂಡಿದ್ದಾರೆ. ಇತ್ತೀಚೆಗೆ ಮೃತ ಗಾಯತ್ರಿ ಅವರ ಮಗಳೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು.