ಮೈಸೂರು: ಪರಿವಾರ ಜನಾಂಗದವರಿಗೆ ಅಧಿಕಾರಿಗಳು ಯಾವುದೇ ತೊಂದರೆ ಕೊಡದೆ ಎಸ್.ಟಿ. ಸರ್ಟಿಫಿಕೇಟ್ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ ಎಂದು ವರುಣಾ ಕೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ವರುಣಾ ಕ್ಷೇತ್ರದ ಬೊಕ್ಕಹಳ್ಳಿಯಲ್ಲಿ ಉಚ್ಚಲಗಮ್ಮ ದೇವಸ್ಥಾನ ಉದ್ಘಾಟನೆ, ಆಲತ್ತೂರಿನಲ್ಲಿ ವಾಲ್ಮೀಕಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮೈಸೂರು, ಕೊಡಗು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಪರಿವಾರ ಪದವು ನಾಯಕ ಜನಾಂಗದ ಪರ್ಯಾಯ ಪದವಾಗಿದ್ದು, ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದರು ಸಹ ಅಧಿಕಾರಿಗಳು ಎಸ್.ಟಿ ಸರ್ಟಿಫಿಕೇಟ್ ಕೊಡಲು ತಕರಾರು ಮಾಡುತ್ತಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರು ಭಾಗದ ನಾಯಕ ಸಮುದಾಯದ ಮುಖಂಡರ ಸಭೆ ನಡೆಸಿ ಪರಿವಾರ ಜನಾಂಗದವರಿಗೆ ಎಸ್.ಟಿ. ಸರ್ಟಿಫಿಕೇಟ್ ಕೊಡಬೇಕು ಎಂದು ಆದೇಶಿಸಿರುವುದರ ಜೊತೆಗೆ ಈ ಹಿಂದೆ ಪರಿವಾರ ಜನಾಂಗದವರು ಎಸ್.ಟಿ. ಸರ್ಟಿಫಿಕೇಟ್ ಪಡೆದಿರುವವರ ವಿರುದ್ಧ ಕೇಸ್ ಹಾಕಿದ್ದು ಆ ಎಲ್ಲಾ ಕೇಸ್‌ಗಳನ್ನು ಹಿಂದಕ್ಕೆ ಪಡೆಯಲು ಸೂಚಿಸಿದ್ದಾರೆ.
ಪರಿವಾರ ನಾಯಕ ಪರ್ಯಾಯ ಪದಕ್ಕೆ ಇದ್ದ ಗೊಂದಲವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿವಾರಿಸಿದ್ದಾರೆ ಎಂದ ಅವರು ಈ ಹಿಂದೆ ನಾನು ಶಾಸಕನಾಗಿದ್ದಾಗ ಉಚ್ಚಲಗಮ್ಮ ದೇವಸ್ಥಾನಕ್ಕೆ ೮ಲಕ್ಷ ರೂ ಅನುಧಾನ ಬಿಡುಗಡೆ ಮಾಡಿದ್ದೆ, ಉಳಿದಿರುವ ದೇವಸ್ಥಾನದ ಕೆಲಸ ಮುಗಿಸುವ ಜವಬ್ದಾರಿ ನಮ್ಮ ಮೇಲೆ ಇದ್ದು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಉಳಿದ ಹಣ ಬಿಡುಗಡೆ ಮಾಡಿಸುವುದಾಗಿ ತಿಳಿಸಿದ ಅವರು ನಿಮ್ಮೆಲ್ಲರ ಆರ್ಶೀವಾದದಿಂದ ನಮ್ಮ ತಂದೆ ೨ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ನಿಮ್ಮ ಗ್ರಾಮದ ಎಲ್ಲಾ ಕೆಲಸಗಳನ್ನು ಹಂತ ಹಂತವಾಗಿ ಮಾಡಿಕೊಡುವುದಾಗಿ ತಿಳಿಸಿದರು.
ರಾಜ್ಯ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್ ಸಿ ಬಸವರಾಜು ಮಾತನಾಡಿ ಮೈಸೂರು ಭಾಗದಲ್ಲಿ ಪರಿವಾರದವರಿಗೆ ಎಸ್.ಟಿ. ಸರ್ಟಿಫಿಕೇಟ್ ಕೊಡದೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ನಾಯಕ ಮುಖಂಡರನ್ನು ಸಭೆ ಕರೆದು ಚರ್ಚಿಸಿ ಪರಿವಾರದವರಿಗೆ ಎಸ್.ಟಿ. ಸರ್ಟಿಫಿಕೇಟ್ ಕೊಡಲು ಅಧಿಕಾರಿಗಳಿಗೆ ಆದೇಶ ನೀಡಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಮುಖ್ಯಮಂತ್ರಿಗಳಿಗೆ ನಾಯಕ ಜನಾಂಗದ ಪರವಾಗಿ ಅನಂತ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಕಾರ್ಯದರ್ಶಿ ವರುಣಾ ಮಹೇಶ್, ಜಿ.ಪಂ ಮಾಜಿ ಸದಸ್ಯೆ ರೇವಮ್ಮ ಮಾಲೇಗೌಡ, ಗ್ರಾ.ಪಂ ಅಧ್ಯಕ್ಷ ಶಿವರಾಮನಾಯ್ಕ ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್ ವಿಜಯ್, ಆಪ್ತ ಸಹಾಯಕ ಪ್ರದೀಪ್ ಕುಮಾರ್, ಮುಖಂಡರಾದ ದಕ್ಷಿಣಾಮೂರ್ತಿ, ರಂಗಸ್ವಾಮಿ, ಕಲ್ಮಳ್ಳಿ ಬಾಬು, ನೀಲಿಸಿದ್ದು, ದೊರೆಸ್ವಾಮಿ, ಮಾದಪ್ಪ, ಶ್ರೀಧರ್, ಕೆಂಪಣ್ಣ, ಲಿಂಗಯ್ಯ ಹಾಜರಿದ್ದರು.