ಮೈಸೂರು: ಜಿಲ್ಲಾ ಪತ್ರಕರ್ತರ ಸಂಘದ ನೂತನ ಪತ್ರಿಕಾ ಭವನದ ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶನಿವಾರ ಜಿಲ್ಲಾ ಪತ್ರಕರ್ತರ ಸಂಘದ ನಿಯೋಗ ಬೆಂಗಳೂರಿನ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.
ಮನವಿ ಪುರಸ್ಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ತವರು ಜಿಲ್ಲೆ ಮೈಸೂರಿನಲ್ಲಿ ಅತ್ಯುತ್ತಮ ಪತ್ರಿಕಾ ಭವನ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಕಾರ ನೀಡುವೆ ಎಂದು ಸಕಾರಾತ್ಮಕವಾಗಿ ಸ್ಪಂದಿಸಿದರು.
ಪತ್ರಿಕಾ ಭವನದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಡಿ.21 (ಗುರುವಾರ)ರಂದು ಬೆಳಗ್ಗೆ 11ಗಂಟೆಗೆ ಆಯೋಜಿಸುವಂತೆ ಸೂಚಿಸಿ, ಸಮಾರಂಭದಲ್ಲಿ ತಾವು ಪಾಲ್ಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಇದ್ದರು.
ನಿಯೋಗದಲ್ಲಿ ಜಿಲ್ಲಾ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಮಾಜಿ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ಗ್ರಾಮಾಂತರ ಉಪಾಧ್ಯಕ್ಷ ಧರ್ಮಾಪುರ ನಾರಾಯಣ್, ರಾಜ್ಯ ಸಮಿತಿ ಸದಸ್ಯ ಬಿ.ರಾಘವೇಂದ್ರ, ಗ್ರಾಮಾಂತರ ಕಾರ್ಯದರ್ಶಿ ಎಂ.ಮಹದೇವ್, ಕಾರ್ಯಕಾರಿ ಸಮಿತಿ ಸದಸ್ಯರಾದ ಹುಲ್ಲಹಳ್ಳಿ ಶ್ರೀನಿವಾಸ್, ಬಿ.ಆರ್.ಗಣೇಶ್, ದಾ.ರಾ.ಮಹೇಶ್ ಹಾಜರಿದ್ದರು.