ಕೆ. ಆರ್.ನಗರ: ನಮ್ಮದೇ ಸರ್ಕಾರವಿದ್ದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಚಿವರುಗಳು ಆಪ್ತರಾಗಿದ್ದಾರೆ, ಸಾಕಷ್ಟು ಅನುದಾನ ತಂದು ಕ್ಷೇತ್ರದ ಅಭಿವೃದ್ದಿ ಮಾಡುವ ತಾಕತ್ತು ಹೊಂದಿದ್ದೇನೆ. ಯಾವುದೇ ಕಾರಣಕ್ಕೂ ಹಳೆಯ ಕಾಮಗಾರಿಗಳಿಗೆ ಮತ್ತೆ ಭೂಮಿ ಪೂಜೆ ಮಾಡುವುದಿಲ್ಲ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಸಾಲಿಗ್ರಾಮ ತಾಲೂಕು ಬಟಿಗನಹಳ್ಳಿ ಗ್ರಾಮದ ಬಳಿ ೪ ಕೋಟಿ ರೂ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಚುನಾವಣಾ ಪೂರ್ವದಲ್ಲಿ ಈ ಭಾಗದ ಜನತೆಗೆ ನೀಡಿದ ಭರವಸೆಯಂತೆ ಅಗತ್ಯ ಅನುದಾನ ಮಂಜೂರು ಮಾಡಿಸಿ ರಸ್ತೆ ಅಭಿವೃದ್ದಿ ಪಡಿಸಲಾಗುತ್ತದೆ ಎಂದರು.
ಕೆಲವರು ಹಳೆಯ ಅನುದಾನಕ್ಕೆ ಪೂಜೆ ಮಾಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು ಅನುದಾನ ಮಂಜೂರಾಗದೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ತೆವಲು ನನ್ನಗಿಲ್ಲ ಎಂದ ಶಾಸಕರು ಲೋಕೋಪಯೋಗಿ ಇಲಾಖೆಯಿಂದ ವಿವಿಧ ರಸ್ತೆಗಳ ಅಭಿವೃದ್ದಿಗಾಗಿ ೩೦ ಕೋಟಿ ವಿಶೇಷ ಅನುದಾನ ಮಂಜೂರು ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದರ ಜತೆಗೆ ಎಸ್ ಎಸ್ ಟಿಪಿ ಯೋಜನೆಯಡಿಯಲ್ಲಿ ಮಧುವನಹಳ್ಳಿ ಬಡಾವಣೆಯಿಂದ ಹೊಸಕೋಟೆ ಮಾರ್ಗವಾಗಿ ಪಿರಿಯಾಪಟ್ಟಣ ತಾಲೂಕು ಕೆಲ್ಲೂರು ಗ್ರಾಮದವರೆಗೆ ರಸ್ತೆ ಡಾಂಬರೀಕರಣಕ್ಕಾಗಿ ೨೨ ಕೋಟಿ, ಕೆಸ್ತೂರು ಗೇಟ್ ಬಳಿಯಿಂದ ಹುಣಸೂರು ತಾಲೂಕು ಕಟ್ಟೆಮಳಲವಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ೮ ಕೋಟಿ ರೂ ಬಿಡುಗಡೆ ಮಾಡಿಸಲಾಗಿದ್ದು ಅಧಿವೇಶನ ಮುಗಿದ ನಂತರ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.
ಗ್ರಾಮೀಣಾಭಿವೃದ್ದಿ ಇಲಾಖೆ ವತಿಯಿಂದ ೧೦ ಕೋಟಿ, ನೀರಾವರಿ ಇಲಾಖೆಯಿಂದ ೧೯ ಕೋಟಿ ಅನುದಾನ ನೀಡುವಂತೆ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ ಶಾಸಕ ಡಿ.ರವಿಶಂಕರ್ ಭೇರ್ಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದ್ದು ಜನವರಿ ನಂತರ ಅನುದಾನ ಬಿಡುಗಡೆ ಮಾಡಿಸಲಾಗುತ್ತದೆ ಎಂದು ಹೇಳಿದರು.
ಈ ಭಾಗದ ಜನತೆಯ ಬೇಡಿಕೆಯಂತೆ ಹೊಸಅಗ್ರಹಾರ ಬದಲು ಭೇರ್ಯ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಮಾಡುವುದರ ಜತೆಗೆ ಮಿರ್ಲೆ ಮತ್ತು ಭೇರ್ಯ ಜಿ.ಪಂ. ಕ್ಷೇತ್ರಗಳನ್ನಾಗಿ ಉಳಿಸಿಕೊಳ್ಳಲು ಕ್ರಮವಹಿಸಲಾಗಿದೆ, ಸಾಲಿಗ್ರಾಮ ತಾಲೂಕು ಕೇಂದ್ರಕ್ಕೆ ಇಲಾಖಾ ಕಛೇರಿಗಳನ್ನು ಆರಂಭಿಸಿ, ಮಿನಿವಿಧಾನ ಸೌಧ ನಿರ್ಮಾಣ ಸೇರಿದಂತೆ ಇತರ ಇಲಾಖೆಗಳ ಕಟ್ಟಡ ನಿರ್ಮಾಣಕ್ಕೂ ಒತ್ತು ನೀಡಲಾಗುತ್ತದೆ ಎಂದರು.
ಆನಂತರ ಸಾಲಿಗ್ರಾಮದ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಬೇಕಾಗಿರುವ ಅನುದಾನ ನೀಡುವಂತೆ ಈಗಾಗಲೇ ಆರೋಗ್ಯ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಜನವರಿ ನಂತರ ಅಭಿವೃದ್ದಿಗಾಗಿ ಅನುದಾನ ಬಿಡುಗಡೆೆಯಾಗಲಿದೆ ಎಂದರಲ್ಲದೆ ಭೇರ್ಯದಿಂದ ಸಾಲಿಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗಳಿಗೂ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.
ಭೇರ್ಯ ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷಿö್ಮಕೃಷ್ಣೇಗೌಡ, ಉಪಾಧ್ಯಕ್ಷೆ ರೂಪಹರೀಶ್, ಸದಸ್ಯರಾದ ಮಂಜಪ್ಪ, ಬಿ.ಪಿ.ಪ್ರಕಾಶ್, ಬಿ.ಎಲ್.ರಾಜಶೇಖರ್, ಹರ್ಷವರ್ಧಿನಿ, ರೇಖಾಮಹದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉದಯಶಂಕರ್, ಎಂ.ಎಸ್.ಮಹದೇವ್, ವಕ್ತಾರ ಸೈಯದ್‌ಜಾಬೀರ್, ತಾ.ಪಂ. ಮಾಜಿ ಅಧ್ಯಕ್ಷ ಹೆಚ್.ಟಿ.ಮಂಜುನಾಥ್, ಮುಖಂಡರಾದ ವೆಂಕಟೇಶ್, ಪುಟ್ಟಸ್ವಾಮಿಗೌಡ, ನಾಗೇಶ್, ಅನಿಲ್, ಹರೀಶ್, ಪೈಲ್ವಾನ್‌ಕೃಷ್ಣೇಗೌಡ, ಸಣ್ಣರಾಮೇಗೌಡ, ಚಂದ್ರಹಾಸ, ಕಲಿಸಿದ್ದೇಗೌಡ, ಲೋಕೋಪಯೋಗಿ ಇಲಾಖೆಯ ಎಇಇ ಸುಮಿತ, ಇಂಜಿನಿಯರ್ ಚಂದ್ರಮೋಹನ್, ಗುತ್ತಿಗೆದಾರರ ಮಿರ್ಲೆನಾಗರಾಜು, ಡಿ.ಜೆ.ಬಸವರಾಜು, ರಾಜಯ್ಯ ಮತ್ತಿತರರು ಹಾಜರಿದ್ದರು.