Thursday, May 22, 2025
Google search engine

Homeರಾಜ್ಯಸುದ್ದಿಜಾಲರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಜಾನಪದ ಕಲಾ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಚಾಲನೆ

ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಜಾನಪದ ಕಲಾ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಚಾಲನೆ

ಚಾಮರಾಜನಗರ: ರಾಷ್ಟ್ರೀಯ ಆರೋಗ್ಯ ಯೋಜನೆ, ಕಾರ್ಯಕ್ರಮಗಳ ಕುರಿತು ಜನಜಾಗೃತಿ ಮೂಡಿಸುವ ಜಾನಪದ ಕಲಾ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಇಂದು ಚಾಲನೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜಿಲ್ಲೆಯಾದ್ಯಂತ ಒಂದು ವಾರಗಳ ಕಾಲ ನಡೆಯಲಿರುವ ಜಾನಪದ ಕಲಾ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಖಂಜರ ಬಾರಿಸುವ ಮೂಲಕ ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಜಾನಪದ ಕಲಾ ಪ್ರದರ್ಶನವು ಒಂದು ವಾರದ ಐ.ಇ.ಸಿ ಕಾರ್ಯಕ್ರಮಕ್ಕೆ ಸೀಮಿತವಾಗದೇ ನಿರಂತರವಾಗಿ ಆರೋಗ್ಯ ಕಾರ್ಯಕ್ರಮಗಳ ಅರಿವನ್ನು ಬೀದಿನಾಟಕ ಹಾಗೂ ಜಾಗೃತಿ ಗೀತೆಗಳ ಮೂಲಕ ಕಲಾವಿದರು ಜಿಲ್ಲೆಯ ಪ್ರತಿ ಮನೆಮನೆಗೂ ತಲುಪಿಸಬೇಕು. ಜಿಲ್ಲೆಯಲ್ಲಿ ಅದಿವಾಸಿ ಜನರು, ಮಹಿಳೆಯರು ಮತ್ತು ಮಕ್ಕಳಿಗೆ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುವುದು ಅತ್ಯಾವಶ್ಯಕವಾಗಿದೆ ಎಂದರು. ಕ್ಷಯರೋಗ ಹಾಗೂ ಆಶಾಕಿರಣ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯಾದ್ಯಂತ ಆಯ್ಕೆಯಾಗಿರುವ ಜಿಲ್ಲೆಗಳಲ್ಲಿ ಚಾಮರಾಜನಗರವು ಒಂದಾಗಿದೆ. ಅಲ್ಲದೆ ಸಿಕಲ್‌ಸೆಲ್ ಅನಿಮೀಯಾ ಕಾಯಿಲೆ ನಿಯಂತ್ರಣದ ಕುರಿತು ಗಮನ ಹರಿಸಲಾಗುತ್ತಿದೆ. ತಾಯಿ ಕಾರ್ಡ್ ಸೇರಿದಂತೆ ಇತರೆ ಯೋಜನೆಗಳು ಜನರಿಗೆ ಮುಕ್ತವಾಗಿ ಸಿಗುವಂತಹ ವಾತಾವರಣ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಆರೋಗ್ಯ ಸಮಸ್ಯೆಗಳು ಎದುರಾಗುವ ಮೊದಲೆ ಸಮಸ್ಯೆಗಳು ಕಾಣಿಸಿಕೊಳ್ಳದಂತೆ ಜನರು ಎಚ್ಚರ ವಹಿಸಬೇಕು. ಗುಣಮಟ್ಟದ ಆರೋಗ್ಯ ನೀಡುವುದೇ ಜಾನಪದ ಕಲಾ ಪ್ರದರ್ಶನ ಮುಖ್ಯ ಉದ್ದೇಶವಾಗಿದೆ. ಆರೋಗ್ಯದ ಅರಿವು ಮೂಡಿಸುವ ಬೀದಿನಾಟಕ ಹಾಗೂ ಜಾಗೃತಿ ಗೀತೆಗಳು ಹೆಚ್ಚು ಜನರ ಮನಮುಟ್ಟುವಂತಾಗಬೇಕು. ಜನರು ಸಹ ಕಲಾ ಪ್ರದರ್ಶನದ ಸದುಪಯೋಗ ಪಡೆದು ಆರೋಗ್ಯದ ಬಗ್ಗೆ ಹೆಚ್ಚಿನ ಅರಿವನ್ನು ಹೊಂದಬೇಕು. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ಹಾಗೂ ಎಲ್ಲಾ ಗ್ರಾಮ ಪಂಚಾಯಿತಿಗಳು ಆರೋಗ್ಯ ಇಲಾಖೆಗೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ ಅವರು ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಜಾನಪದ ಕಲಾ ಪ್ರದರ್ಶನಕ್ಕೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಚಾಲನೆ ದೊರೆಯುತ್ತಿದೆ. ಭ್ರೂಣ ಹತ್ಯೆ ತಡೆ, ತಾಯಿ ಮತ್ತು ಮಕ್ಕಳ ಆರೋಗ್ಯ, ಸ್ವಚ್ಚತೆ, ಕ್ಷಯ ಮುಕ್ತ, ಮಲೇರಿಯಾ ಮುಕ್ತ ಭಾರತ ಮಾಡುವ ನಿಟ್ಟಿನಲ್ಲಿ ಎಲ್ಲಾ ಆರೋಗ್ಯ ಕಾರ್ಯಕ್ರಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ರಾಜೇಶ್‌ಕುಮಾರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ರವಿಕುಮಾರ್, ಸಹಾಯಕ ಆಡಳಿತಾಧಿಕಾರಿ ಲಿಂಗರಾಜು, ಹಿರಿಯ ವೈದ್ಯಾಧಿಕಾರಿ ಡಾ. ಗಿರಿಜಾಂಬ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ದುಶ್ಯಂತ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್, ಚೇತನ ಕಲಾವಾಹಿನಿ ತಂಡದ ಮುಖ್ಯಸ್ಥರಾದ ಸಿದ್ದರಾಜು, ಇತರರು ಇದ್ದರು.

RELATED ARTICLES
- Advertisment -
Google search engine

Most Popular