ಗುಂಡ್ಲುಪೇಟೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಕಾಡುಹಂದಿಗಳ ಹಿಂಡು ಲಗ್ಗೆಯಿಟ್ಟ ಪರಿಣಾಮ ಅರಿಸಿಣ, ಈರುಳ್ಳಿ ಬೆಳೆ ನಾಶವಾಗಿರುವುದು.
ಗುಂಡ್ಲುಪೇಟೆ: ಕಾಡುಹಂದಿಗಳ ಹಿಂಡು ಲಗ್ಗೆಯಿಟ್ಟು ಅರಿಸಿಣ, ಈರುಳ್ಳಿ, ಮೆಣಸಿ ಬೆಳೆ ನಾಶಪಡಿಸಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ನಡೆದಿದೆ.
ಮಲ್ಲಯ್ಯನಪುರ ಗ್ರಾಮದ ನಾಗರಾಜು ಎಂಬ ರೈತನಿಗೆ ಸೇರಿದ ಸರ್ವೇ ನಂ-219ರ ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಅರಿಸಿಣ, ಈರುಳ್ಳಿ, ಮೆಣಸಿ ಫಸಲಿನ ಮೇಲೆ ಕಾಡುಹಂದಿಗಳ ಹಿಂಡು ದಾಳಿ ನಡೆಸಿ ಜಮೀನಿನಲ್ಲಿ ಬೆಳೆದಿರುವ ಬೆಳೆ ತಿಂದು ತುಳಿದು ಹಾಕಿದೆ. ಇದರಿಂದ ರೈತ ನಷ್ಟದ ಸುಳಿಗೆ ಸಿಲುಕುವಂತಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಸಂಬಂಧಪಟ್ಟ ಅರಣ್ಯಾಧಿಕಾರಿಗಳು ಕಾಡುಹಂದಿಗೆ ದಾಳಿಯಿಂದ ಫಸಲು ನಾಶವಾಗಿರುವ ಜಮೀನನ್ನು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ರೈತ ಮುಖಂಡ ಶಿವಣ್ಣ ಒತ್ತಾಯಿಸಿದ್ದಾರೆ.
ಚಿರತೆ ಹಾವಳಿ: ಮಲ್ಲಯ್ಯನಪುರ-ಕೂತನೂರು ಎಲ್ಲೆಯಲ್ಲಿ ಚಿರತೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿದೆ. ಇದರಿಂದ ರಾತ್ರಿ ವೇಳೆ ರೈತರು ಜಮೀನುಗಳಲ್ಲಿ ಕಾವಲು ಕಾಯಲು ಹೋಗುವುದಕ್ಕೆ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕಾಡುಹಂದಿಗಳು ಜನಮೀನಿನಲ್ಲಿ ಹಿಂಡು ಹಿಂಡಾಗಿ ಲಗ್ಗೆ ಹಿಡುತ್ತಿದೆ. ಇದಕ್ಕೆ ಅರಣ್ಯಾಧಿಕಾರಿಗಳು ಕಡಿವಾಣ ಹಾಕುವಂತೆ ರೈತರು ಆಗ್ರಹಿಸಿದ್ದಾರೆ.