ಉಡುಪಿ: ಸಾಲ ಮರುಪಾವತಿಸದೆ ಸೊಸೈಟಿಯೊಂದಕ್ಕೆ ವಂಚಿಸಿದ ಘಟನೆ ವರದಿಯಾಗಿದ್ದು, ಈ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಡಾನಿಡಿಯೂರಿನ ಸರಸು ಸುವರ್ಣ ಅವರು ಸೊಸೈಟಿಯೊಂದರಲ್ಲಿ 30 ಲ.ರೂ. ಸಾಲ ತೆಗೆದುಕೊಂಡಿದ್ದು, ಇದಕ್ಕಾಗಿ ನಿವೇಶನ ಹಾಗೂ ಮನೆಯನ್ನು ಅಡಮಾನವಾಗಿರಿಸಿಕೊಂಡಿದ್ದರು. ಈ ಅಡಮಾನ ಪತ್ರವು ಉಡುಪಿ ಉಪನೋಂದಣಾಧಿಕಾರಿಯವರ ಕಚೇರಿಯಲ್ಲಿ ನೋಂದಣಿ ಮಾಡಲಾಗಿದ್ದು, ಆ ನೋಂದಣಿ ಪತ್ರಕ್ಕೆ ವಿನೋದ್ ಅವರು ಸಾಕ್ಷಿಯಾಗಿದ್ದರು.
ಈ ಸಾಲ ಸಂಪೂರ್ಣವಾಗಿ ಮರುಪಾವತಿಯಾಗಿರಲಿಲ್ಲ. ಸೊಸೈಟಿಯಲ್ಲಿ ಸಾಲವಿದ್ದರೂ ಸರಸು ಸುವರ್ಣ ಹಾಗೂ ವಿನೋದ್ ಅವರು ಸೇರಿಕೊಂಡು ಅಡಮಾನವಿರಿಸಿದ ಆಸ್ತಿಯನ್ನು 2022ರಲ್ಲಿ ವಿನೋದ್ ತನ್ನ ಹೆಸರಿಗೆ ಅಕ್ರಮವಾಗಿ ವರ್ಗಾಯಿಸಿಕೊಂಡು ಸೊಸೈಟಿಗೆ ದ್ರೋಹ ಎಸಗಿದ್ದಾರೆ ಎಂದು ಸೊಸೈಟಿಯ ಸಿಇಒ ಉಡುಪಿ ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.