ಕೆ.ಆರ್.ಪೇಟೆ : ಮನುಷ್ಯನಿಗೆ ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯ ವಿಶ್ವದಲ್ಲಿಯೇ ಯಾವುದೂ ಇಲ್ಲ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆ ಹೆಚ್ಚು ಕಾಳಜಿ ವಹಿಸಬೇಕು ಎಂದು ರಾಜ್ಯ ಆರ್‌ಟಿಓ ಅಧಿಕಾರಿಗಳ ಸಂಘದ ಅಧ್ಯಕ್ಷರು ಹಾಗೂ ಧರ್ಮಸ್ಥಳ ಜನಜಾಗೃತಿ ವೇದಿಕೆಯ ನಿರ್ದೇಶಕರಾದ ಮಲ್ಲಿಕಾರ್ಜುನ್ ಸಲಹೆ ನೀಡಿದರು.
ಅವರು ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿಯ ಸಿಂಧುಘಟ್ಟ ಗ್ರಾಮದ ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಿಕ್ಕೇರಿ ವಿಭಾಗ ಹಾಗೂ ಮಾದೇಗೌಡ ಮೆಮೋರಿಯಲ್ ಆಸ್ಪತ್ರೆಯ ಸಂಯುಕ್ತ ಸಂಸ್ಥೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸಂವರ್ಧನೆಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿ, ಗ್ರಾಮೀಣ ಜನರು ಆರೋಗ್ಯವಂತರಾಗಿರುವಂತೆ ಮುಂಜಾಗರೂಕತೆ ವಹಿಸಲು ನೆರವಾಗಿದೆ. ಅಲ್ಲದೇ ಕೃಷಿ ಚಟುವಟಿಕೆಗಳಿಗೆ ನೆರವಾಗುತ್ತಾ ಮಹಿಳಾ ಸಬಲೀಕರಣ ಹಾಗೂ ಆರ್ಥಿಕ ಸ್ವಾವಲಂಬನೆಗೆ ದಾರಿದೀಪವಾಗಿದೆ ಎಂದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರೂ ಆರೋಗ್ಯ ಸಂವರ್ಧನೆಗೆ ಮಿತ ಆಹಾರ ಮತ್ತು ಗುಣಮಟ್ಟದ ಆಹಾರ ಸೇವಿಸಿ ಶಿಸ್ತು ಬದ್ಧವಾದ ಜೀವನ ನಡೆಸಬೇಕು ಎಂದರು.
ಕೆ.ಆರ್.ಪೇಟೆ ಪಟ್ಟಣದ ಮಾದೇಗೌಡ ಸ್ಮಾರಕ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಲೋಹಿತ್ ಆರೋಗ್ಯ ತಪಾಸಣೆಗೆ ಚಾಲನೆ ನೀಡಿ ಮಾತನಾಡಿ, ಇಂದು ಗ್ರಾಮೀಣ ಪ್ರದೇಶದ ಜನರು ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಯುವಜನರು ಮೂಳೆ ಸಾಂದ್ರತೆಯ ವೈಫಲ್ಯದಿಂದ ಮೂಳೆ ರೋಗದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದಕ್ಕಾಗಿ ಸೊಪ್ಪು, ಹಾಲು, ಮೊಟ್ಟೆ ಸೇವಿಸುವ ಮೂಲಕ ಮೂಳೆ ಸಾಂದ್ರತೆಯನ್ನು ಹೆಚ್ಚಿಸಿಕೊಳ್ಳಬಹುದು ಎಂದರು.
ಕಿಕ್ಕೇರಿ ವಿಭಾಗದ ಯೋಜನಾಧಿಕಾರಿ ವೀರೇಶಪ್ಪ, ಸಿಂಧಘಟ್ಟ ಗ್ರಾಪಂ ಸದಸ್ಯ ನಾಗಣ್ಣ, ಸಿಂಧುಘಟ್ಟ ವೈದ್ಯಾಧಿಕಾರಿ ಡಾ.ಮನೋಜ್, ಮೇಲ್ವಿಚಾರಕಿ ಗುಣಶ್ರೀ, ವೈದ್ಯರಾದ ಡಾ.ಶಶಿಕಿರಣ್, ಡಾ.ನಾಗರತ್ನ, ಡಾ.ಸುಮನಾ, ಮುಖಂಡರಾದ ಮಹದೇವ್, ಕುಮಾರಸ್ವಾಮಿ, ಸಿಂಧುಘಟ್ಟ ಗ್ರಾಪಂ ಮಾಜಿ ಅಧ್ಯಕ್ಷ ರವಿ, ಮೇಲ್ವಿಚಾರಕಿ ಪರಿಣಿತ ಸೇರಿದಂತೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು, ಸೇವಾ ಪ್ರತಿನಿಧಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.