Tuesday, May 20, 2025
Google search engine

Homeರಾಜ್ಯಸುದ್ದಿಜಾಲ೫ ವರ್ಷದಲ್ಲಿ ೧,೮೦,೨೫೩ ಮನೆ ನಿರ್ಮಾಣ: ಸಚಿವ ಜಮೀರ್

೫ ವರ್ಷದಲ್ಲಿ ೧,೮೦,೨೫೩ ಮನೆ ನಿರ್ಮಾಣ: ಸಚಿವ ಜಮೀರ್

ಬೆಂಗಳೂರು: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ (ನಗರ) ಸರ್ವರಿಗೂ ಸೂರು ಅಭಿಯಾನದ ಮೂಲಕ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ಅನುಷ್ಠಾನಗೊಳಿಸುತ್ತಿರುವ ೧.೮೦ ಲಕ್ಷ ಮನೆಗಳಿಗೆ ಫಲಾನುಭವಿಗಳು ಪಾವತಿಸಬೇಕಿದ್ದ ೪.೫ ಲಕ್ಷ ರೂ.ಗಳಲ್ಲಿ ಕೇವಲ ಒಂದು ಲಕ್ಷ ರೂ. ಭರಿಸಿದರೆ ಸಾಕು ಉಳಿದ ೩.೫ ಲಕ್ಷ ರು.ಗಳನ್ನು ರಾಜ್ಯ ಸರ್ಕಾರವೇ ಭರಿಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಸತಿ ಸಚಿವ ಜಮೀರ್ ಅಹಮದ್ ಖಾನ್, ಈ ಯೋಜನೆಯಡಿ ಮೊದಲ ಹಂತದಲ್ಲಿ ೪೮,೭೯೬ ಮನೆಗಳನ್ನು ಪೂರ್ಣಗೊಳಿಸಲು ೫೦೦ ಕೋಟಿ ರೂ. ಬಿಡುಗಡೆ ಮಾಡಲು ಇಂದಿನ ಸಭೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ. ಉಳಿದ ೧ ಲಕ್ಷದ ೩೦ ಸಾವಿರ ಮನೆಗಳನ್ನು ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ಪೂರ್ಣಗೊಳಿಸಲು ಸಂಪುಟ ಸಭೆ ಸಮ್ಮತಿ ನೀಡಿದೆ ಎಂದರು.

ಯೋಜನೆಯಡಿ ೨೦೧೮ರಿಂದ ೨೦೨೩ರವರೆಗೆ ರಾಜ್ಯಕ್ಕೆ ೧,೮೦,೨೫೩ ಮನೆಗಳು ಮಂಜೂರಾಗಿದ್ದರೂ ಫಲಾನುಭವಿಗಳಿಗೆ ನಿಗದಿಪಡಿಸಿದ್ದ ೪.೫ ಲಕ್ಷ ರೂ. ಹಣವನ್ನು ಪಾವತಿಸಲು ಬಹುತೇಕರಿಗೆ ಸಾಧ್ಯವಾಗದೆ ಪೂರ್ಣಗೊಳಿಸಲಾಗಿರಲಿಲ್ಲ. ಈ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡಲು ಕೊಳಗೇರಿಗಳಲ್ಲಿನ ಶೆಡ್, ಗುಡಿಸಲುಗಳನ್ನು ತೆರವುಗೊಳಿಸಲಾಗಿದೆ. ಅಲ್ಲಿನ ನಿವಾಸಿಗಳು ಮನೆಗಳಿಲ್ಲದೆ ತೊಂದರೆಯಲ್ಲಿದ್ದಾರೆ. ಹಾಗಾಗಿ ಸರ್ವರಿಗೂ ಸೂರು ಕಲ್ಪಿಸುವ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಪ್ರತಿ ಮನೆಗೆ ಅರ್ಜಿದಾರರು ೪.೫ ಲಕ್ಷ ರೂ. ಬದಲಿಗೆ ಒಂದು ಲಕ್ಷ ರೂ. ಪಾವತಿಸಿದರೆ ಸಾಕು ಎಂದು ಜಮೀರ್ ತಿಳಿಸಿದರು.

ಈ ಯೋಜನೆಗೆ ಒಟ್ಟು ೬,೧೭೦ ಕೋಟಿ ರೂ. ಬೇಕಾಗಲಿದೆ. ಪ್ರತಿ ಮನೆ ನಿರ್ಮಾಣಕ್ಕೆ ೭.೫ ಲಕ್ಷ ರೂ. ವೆಚ್ಚವಾಗಲಿದೆ. ಇದರಲ್ಲಿ ರಾಜ್ಯ ಸರ್ಕಾರದಿಂದ ಸಾಮಾನ್ಯ ವರ್ಗದವರಿಗೆ ೧.೨೦, ಎಸ್‌ಸಿ, ಎಸ್‌ಟಿಗಳಿಗೆ ೨ ಲಕ್ಷ ರೂ. ಸಹಾಯಧನ ಹಾಗೂ ಕೇಂದ್ರ ಸರ್ಕಾರದಿಂದ ಉಳಿದ ಸಹಾಯಧನ ಸೇರಿ ಒಟ್ಟು ೩ ಲಕ್ಷ ರೂ. ಭರಿಸುವುದು. ಉಳಿದ ೪.೫ ಲಕ್ಷ ರೂ. ಹಣವನ್ನು ಫಲಾನುಭವಿಗಳು ಭರಿಸಬೇಕೆಂಬ ನಿಯಮ ಇತ್ತು. ಆದರೆ, ಈ ಹಣವನ್ನು ಬಹುತೇಕ ಅರ್ಜಿದಾರರು ಭರಿಸಲಾಗಿಲ್ಲ. ಹಾಗಾಗಿ ಇದೀಗ ಸರ್ಕಾರ ಫಲಾನುಭವಿ ತಲಾ ಕೇವಲ ೧ ಲಕ್ಷ ರೂ. ಪಾವತಿಸಿದರೆ ಸಾಕು ಎಂದು ತೀರ್ಮಾನಿಸಲಾಗಿದೆ. ಇದರಿಂದ ಫಲಾನುಭವಿಗಳಿಂದ ೪೮೦ ಕೋಟಿ ರೂ. ಬರಲಿದೆ. ಉಳಿದ ೪೯೩೨ ಕೋಟಿ ರೂ.ಗಳನ್ನು ಸರ್ಕಾರವೇ ಭರಿಸಲಿದೆ ಎಂದು ಜಮೀರ್ ಮಾಹಿತಿ ನೀಡಿದರು.

RELATED ARTICLES
- Advertisment -
Google search engine

Most Popular