ವಿಜಯಪುರ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ಆದೇಶವನ್ನು ವಾಪಸ್ ಪಡೆಯುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದು, ಸಿಎಂ ಸಿದ್ದರಾಮಯ್ಯ ಎರಡನೇ ಟಿಪ್ಪು ಸುಲ್ತಾನ್. ಆತನ ಅವತಾರವೇ ಸಿದ್ದರಾಮಯ್ಯ. ಹಿಜಾಬ್ ನಿಷೇಧ ಹಿಂಪಡೆಯೋದು ಸೂಕ್ತ ಅಲ್ಲ ಎಂದು ಎಂದು ಕಿಡಿಕಾರಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರ ಹಿಜಾಬ್ ನಿಷೇಧ ಮಾಡಿಲ್ಲ. ಶಾಲೆಯಲ್ಲಿ ಸಮಾನತೆ ಇರಲಿ ಎಂಬ ಕಾರಣಕ್ಕೆ ಶಿಕ್ಷಣ ಸಂಸ್ಥೆಗಳಲ್ಲಿ ಧರಿಸದಂತೆ ಆದೇಶ ಹೊರಡಿಸಿತ್ತು. ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಒಂದೆ ಸಮವಸ್ತ್ರದ ಕಾಯ್ದೆ ಮಾಡಿದ್ದರು. ಈ ರೀತಿ ಅವರವರಿಗೆ ತಿಳಿದಿದ್ದನ್ನ ಅವರು ಧರಿಸಿ ಬರೋದಾದರೆ, ನಾಳೆ ಹಿಂದೂ ಸಮುದಾಯದ ವಿದ್ಯಾರ್ಥಿಗಳು ಕೇಸರಿ ಶಾಲು, ಹಣೆಗೆ ತಿಲಕ ಇಟ್ಟುಕೊಂಡು ಬರುತ್ತಾರೆ. ಇದು ಸಂಘರ್ಷಕ್ಕೆ ಹಾದಿ ಆಗುತ್ತದೆ ಎಂದು ಯತ್ನಾಳ್ ಹೇಳಿದ್ದಾರೆ.
ಈ ರೀತಿ ಆದರೆ ಶ್ರೀಮಂತರ ಮಕ್ಕಳು ಒಳ್ಳೆಯ ಬಟ್ಟೆ, ಚಿನ್ನಾಭರಣ ಹಾಕಿಕೊಂಡು ಬರುತ್ತಾರೆ. ಆಗ ಬಡ ಮಕ್ಕಳ ಭಾವನೆಗೆ ಪೆಟ್ಟು ಬೀಳುತ್ತದೆ. ಲೋಕಸಭಾ ಚುನಾವಣೆ ಹಿನ್ನೆಲೆ ಮುಸ್ಲಿಮರ ತುಷ್ಟೀಕರಣಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ಲೋಕಸಭೆಯಲ್ಲಿ ಅವರೆಲ್ಲ ಇವರಿಗೆ ಮತ ಚಲಾಯಿಸ್ತಾರೆ ಎಂದು ಕೊಂಡಿದ್ದಾರೆ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.