ಢಾಕಾ: ಬಾಂಗ್ಲಾದೇಶದಲ್ಲಿ ಭಾನುವಾರ(ಜ.7) ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಮತ್ತು ಅವಾಮಿ ಲೀಗ್ ಮುಖ್ಯಸ್ಥೆ ಶೇಖ್ ಹಸೀನಾ ಗೆಲುವಿನ ನಗೆ ಬೀರಿದ್ದಾರೆ.
76 ವರ್ಷದ ಶೇಖ್ ಹಸೀನಾ 2,49,965 ಮತಗಳನ್ನು ಪಡೆದರೆ, ಅವರ ಹತ್ತಿರದ ಪ್ರತಿಸ್ಪರ್ಧಿ ಮತ್ತು ಬಾಂಗ್ಲಾದೇಶ ಸುಪ್ರೀಂ ಪಾರ್ಟಿಯ ಎಂ. ನಿಜಾಮ್ ಉದ್ದೀನ್ ಲಷ್ಕರ್ ಕೇವಲ 469 ಮತಗಳನ್ನು ಪಡೆದಿದ್ದಾರೆ. ಬಾಂಗ್ಲಾದೇಶದ ಪ್ರಮುಖ ವಿರೋಧ ಪಕ್ಷ ಬಿಎನ್‌ಪಿ ಮತ್ತು ಅದರ ಮಿತ್ರಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿದ್ದವು.
ಸಂಸತ್ತಿನ 300 ಸ್ಥಾನಗಳ ಪೈಕಿ ಹಸೀನಾ ಅವರ ಪಕ್ಷ 223 ಸ್ಥಾನಗಳನ್ನು ಗೆದ್ದಿದೆ. ಮಾಧ್ಯಮ ವರದಿಗಳ ಪ್ರಕಾರ 299 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಅಭ್ಯರ್ಥಿಯೊಬ್ಬರ ನಿಧನದಿಂದಾಗಿ ಒಂದು ಕ್ಷೇತ್ರದಲ್ಲಿ ಚುನಾವಣೆಯನ್ನು ಮುಂದೂಡಲಾಗಿದೆ.
ಹಸೀನಾ ಅವರು ಗೋಪಾಲ್ ಗಂಜ್-3 ಕ್ಷೇತ್ರದಲ್ಲಿ ಪ್ರಚಂಡ ಗೆಲುವು ಸಾಧಿಸಿದ್ದಾರೆ. ಈ ಮೂಲಕ 8ನೇ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.
2009ರಿಂದ ಬಾಂಗ್ಲಾವನ್ನು ಆಳುತ್ತಿರುವ ಹಸೀನಾ, ಏಕಪಕ್ಷೀಯ ಚುನಾವಣೆಯಲ್ಲಿ ದಾಖಲೆಯ ನಾಲ್ಕನೇ ಅವಧಿಗೆ ಅಧಿಕಾರದ ಗದ್ದುಗೆ ಏರಿದ್ದಾರೆ. ಈ ಗೆಲುವಿನೊಂದಿಗೆ ಹಸೀನಾ ಅವರು ಸ್ವಾತಂತ್ರ್ಯದ ನಂತರ ಬಾಂಗ್ಲಾದೇಶದಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ .