ಬಳ್ಳಾರಿ: ಜಿಲ್ಲೆಯಲ್ಲಿ ಕೆಎಂಇಆರ್‌ಸಿ ಅನುದಾನದಲ್ಲಿ ರೂ. 20 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಬಳ್ಳಾರಿ ಆಗ್ರೋ ಪ್ರೊಸೆಸಿಂಗ್ ಕ್ಲಸ್ಟರ್ (ಬಿಎಪಿಸಿ) ನಿರ್ಮಿಸಲು ರಾಜ್ಯ ಗಣಿ-ಪರಿಸರ ಪುನಶ್ಚೇತನ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದರು. ರಾಜ್ಯ ಸಾಂಬಾರು ಅಭಿವೃದ್ಧಿ ಮಂಡಳಿ ಹುಬ್ಬಳ್ಳಿ, ಭಾರತೀಯ ಸಾಂಬಾರು ಮಂಡಳಿ ಕೊಚ್ಚಿನ್ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ನಗರದ ಹೋಟೆಲ್ ರಾಯಲ್ ಫೆರ್ಟ್ ನಲ್ಲಿ ಆಯೋಜಿಸಿದ್ದ ಸಾಂಬಾರು ಖರೀದಿದಾರರ ಮತ್ತು ಮಾರಾಟಗಾರರ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಳ್ಳಾರಿ ಜಿಲ್ಲೆ ಕಾಳುಮೆಣಸು ಬೆಳೆಗೆ ಹೆಸರುವಾಸಿ. ನಮ್ಮ ಭಾಗದ ರೈತರಿಗೆ ಸ್ಥಳೀಯ ಮಾರುಕಟ್ಟೆ ಒದಗಿಸಲು ಬಹುದಿನಗಳ ಬೇಡಿಕೆಯಾದ ಬಿಎಪಿಸಿ (ಬಳ್ಳಾರಿ ಆಗ್ರೋ ಪ್ಯಾಕ್ಸೆಸಿಂಗ್ ಕ್ಲಸ್ಟರ್) ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳು ಮತ್ತು ಮಾರುಕಟ್ಟೆ ವ್ಯವಸ್ಥೆಗೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಉತ್ತೇಜನ ನೀಡುತ್ತಿದೆ. ಖರೀದಿದಾರರ ಮತ್ತು ಮಾರಾಟಗಾರರ ಸಹಕಾರ ಅಗತ್ಯ. ಕೇರಳದ ಕೊಚ್ಚಿನ್‌ನಲ್ಲಿರುವ ಭಾರತೀಯ ಸಾಂಬಾರು ಮಂಡಳಿ (ಅಭಿವೃದ್ಧಿ) ನಿರ್ದೇಶಕ ಧರ್ಮೇಂದ್ರ ದಾಸ್ ಮಾತನಾಡಿ, ಕರ್ನಾಟಕ ರಾಜ್ಯವು ಮಸಾಲೆ ಉತ್ಪಾದನೆ, ಮೌಲ್ಯಮಾಪನ ಮತ್ತು ರಫ್ತಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕರ್ನಾಟಕ ರಾಜ್ಯವು ದೇಶದಲ್ಲಿ ಮೆಣಸಿನಕಾಯಿ ಉತ್ಪಾದನೆಯಲ್ಲಿ 4 ನೇ ಸ್ಥಾನದಲ್ಲಿದೆ ಮತ್ತು ಭಾರತೀಯ ಮಸಾಲೆ ಕ್ಷೇತ್ರದಲ್ಲಿ ಗಮನಾರ್ಹ ಸ್ಥಾನವನ್ನು ಹೊಂದಿದೆ. ಭಾರತವು ನಾನಾ ಮಸಾಲೆಗಳ ತವರು ಭೂಮಿಗೆ ಹೆಸರುವಾಸಿಯಾಗಿದೆ.

2022-23ರ ಅವಧಿಯಲ್ಲಿ ಭಾರತವು 14 ಲಕ್ಷ ಮೆಟ್ರಿಕ್ ಟನ್ ಮಸಾಲೆ ಮತ್ತು ಮಸಾಲೆ ಉತ್ಪನ್ನಗಳನ್ನು ರಫ್ತು ಮಾಡಿದೆ. 2030 ರ ವೇಳೆಗೆ 10 ಬಿಲಿಯನ್ ಡಾಲರ್‌ಗಳನ್ನು ಸಾಧಿಸಲು ಭಾರತವು ಮಸಾಲೆ ರಫ್ತು ಮಾಡುವ ಗುರಿಯನ್ನು ಹೊಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರವು ದೇಶದಿಂದ ಮಸಾಲೆಗಳ ರಫ್ತು ಹೆಚ್ಚಿಸಲು ಸಮ್ಮೇಳನಗಳ ಮೂಲಕ ಪರಿಚಯಿಸುತ್ತಿದೆ. ಖರೀದಿದಾರರು ಮತ್ತು ಮಾರಾಟಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಭಾರತೀಯ ಸಾಂಬಾರು ಮಂಡಳಿಯು ಸಾಮಾನ್ಯ ವೇದಿಕೆಯು ತಮ್ಮ ಕೃಷಿ ಉತ್ಪನ್ನಗಳ ಗರಿಷ್ಠ ಬೆಲೆಯನ್ನು ಪಡೆಯಲು ಖರೀದಿದಾರರೊಂದಿಗೆ ನೇರ ವ್ಯಾಪಾರ ಸಂಪರ್ಕವನ್ನು ರಚಿಸುವ ಮೂಲಕ ರಫ್ತುಗಳನ್ನು ಬೆಂಬಲಿಸುತ್ತಿದೆ ಎಂದು ಮಾಹಿತಿ ನೀಡಿದೆ. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಿರಿಯ ಉಪಾಧ್ಯಕ್ಷ ಎನ್.ಎಂ.ಯಶವಂತ್ ರಾಜ್ ಮಾತನಾಡಿದರು. ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯಿಂದ “ಮೆಣಸಿನಕಾಯಿ ಬೆಳೆಗಳಲ್ಲಿ ಸುಧಾರಿತ ಕೃಷಿ ಕ್ರಮಗಳು” ಎಂಬ ಕಿರು ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು.
ಬಳಿಕ ಅದ್ದೂರಿ ವಸ್ತುಗಳ ಖರೀದಿದಾರರ ಹಾಗೂ ಮಾರಾಟಗಾರರ ಸಮಾವೇಶ ನಡೆಯಿತು. ಸಮಾವೇಶದಲ್ಲಿ ನಾನಾ ತಳಿಯ ಮೆಣಸಿನಕಾಯಿ ಸೇರಿದಂತೆ ಇತರೆ ತೋಟಗಾರಿಕೆ ಬೆಳೆ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಈ ಸಂದರ್ಭದಲ್ಲಿ ಮುನಿರಾಬಾದ್ ತೋಟಗಾರಿಕಾ ಮಹಾವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ರಾಘವೇಂದ್ರ ಆಚಾರಿ, ಮುನಿರಾಬಾದ್ ತೋಟಗಾರಿಕಾ ಮಹಾವಿದ್ಯಾಲಯದ ಕೃಷಿ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಜಿ.ಯಾದವ್, ಭಾರತೀಯ ಸಾಂಬಾರು ಮಂಡಳಿ (ಮಾರುಕಟ್ಟೆ) ಉಪನಿರ್ದೇಶಕ ಎಂ.ಮಣಿಕಂದನ, ವಿಶ್ವೇಶ್ವರಯ್ಯ ವ್ಯಾಪಾರ ವಹಿವಾಟು ಕೇಂದ್ರದ ಉಪನಿರ್ದೇಶಕ ಮನಸೂರ, ಸಕಲೇಶಪುರ ಭಾರತೀಯ ಸಾಂಬಾರು ಮಂಡಳಿಯ ಉಪನಿರ್ದೇಶಕ ವೈ.ಹೊನ್ನೂರ, ರಾಜ್ಯ ಸಾಂಬಾರು ಅಭಿವೃದ್ಧಿ ಸಮಿತಿ ಹುಬ್ಬಳ್ಳಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್.ಗಿರೀಶ್, ರಾಜ್ಯ ಸಾಂಬಾರು. ಸಾಮಗ್ರಿ ಅಭಿವೃದ್ಧಿ ಸಮಿತಿ ಹುಬ್ಬಳ್ಳಿ (ಅಭಿವೃದ್ಧಿ ಸಂಸ್ಕರಣೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ) ಪ್ರಧಾನ ವ್ಯವಸ್ಥಾಪಕ ಸಿದ್ದರಾಮಯ್ಯ ಎಂ.ಬರಗಿಮಠ, ತೋಟಗಾರಿಕೆ ಉಪನಿರ್ದೇಶಕ ಸಂತೋಷ ಸಪ್ಪಂಡಿ, ಕೃಷಿ ಇಲಾಖೆ ಉಪನಿರ್ದೇಶಕ ಡಾ.ಎನ್. ಕರ್ನಾಟಕ ರಾಜ್ಯ ಸಾಂಬಾರು ಆಡಳಿತ ಮಂಡಳಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೋಮಶೇಖರ್, ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕರು ಹಾಗೂ ತರಬೇತಿ ಕೇಂದ್ರ, ಉಪಸ್ಥಿತರಿದ್ದರು.
