ತುಮಕೂರು: ತುಮಕೂರು ಜಿಲ್ಲಾ ಕಾಂಗ್ರೆಸ್ ನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಮಾಜಿ ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್ ನತ್ತ ಮುಖ ಮಾಡುತ್ತಿದ್ದಂತೆ ಪರೋಕ್ಷ ವಿರೋಧ ಹೆಚ್ಚಾಗಿದೆ.
ಡಾ. ಜಿ.ಪರಮೇಶ್ವರ್ ಆಪ್ತ ಮುರುಳೀಧರ್ ಹಾಲಪ್ಪರ ಬೆಂಬಲಿಗರಿಂದ ಖಾಸಗಿ ಕಾಲೇಜೊಂದರಲ್ಲಿ ಸಭೆ ನಡೆಸಲಾಗಿದ್ದು, ಮುರುಳೀಧರ್ ಹಾಲಪ್ಪಗೆ ಟಿಕೆಟ್ ನೀಡುವಂತೆ ಒತ್ತಾಯಿಸಲಾಗಿದೆ. ಮಾಜಿ ಶಾಸಕರಾದದ ಲಕ್ಕಪ್ಪ, ಎಚ್.ನಿಂಗಪ್ಪ, ಗಂಗಹನುಮಯ್ಯ ಮುರುಳೀಧರ್ ಪರ ಬ್ಯಾಟ್ ಬೀಸಿದ್ದಾರೆ. ಆಮದು ವ್ಯಕ್ತಿಗಳನ್ನು ಕರೆದು ಟಿಕೆಟ್ ಕೊಡೋದು ಬೇಡವೆಂದು ಒಕ್ಕೋರಲಿನಿಂದ ಆಗ್ರಹಿಸಿದ್ದಾರೆ.
ಸಭೆಯಲ್ಲಿ ಪಾಲ್ಗೊಂಡ ನೂರಾರು ಸಂಖ್ಯೆಯ ಮುಖಂಡರು, ಕಾರ್ಯಕರ್ತರು ಮುದ್ದಹನುಮೇಗೌಡರಿಗೆ ಟಿಕೆಟ್ ಕೊಡದಂತೆ ಪರೋಕ್ಷವಾಗಿ ಆಗ್ರಹಿಸಿದ್ದಾರೆ.
ಮುದ್ದಹನುಮೇಗೌಡರ ವಿರುದ್ಧ ಹರಿಹಾಯ್ದ ಮುರುಳೀಧರ್ ಹಾಲಪ್ಪ
ಜನ ಸಾಮಾನ್ಯರ ಜೊತೆ ಒಡನಾಟ ಇರೋದು ಗೊತ್ತು. ತುಮಕೂರಿನಲ್ಲಿ ಸಭೆ ಮಾಡಿ ಜನರ ಕಷ್ಟ ಆಲಿಸೋದು ಗೊತ್ತು. ದೆಹಲಿಗೆ ಹೋಗೋದು, ಬಾಂಬೆಗೆ ಹೋಗೋದು, ಸೋಫಾ ಮೇಲೆ ಕುಳಿತು ಫೋಟೋ ಕ್ಲಿಕ್ ಮಾಡೋದು ನನಗೆ ಗೊತ್ತಿಲ್ಲ. ನಮಗೆ ಡಾಬಾದಲ್ಲಿ, ಇಸ್ಪಿಟ್ ಕ್ಲಬ್ ನಲ್ಲಿ ಭೇಟಿ ಮಾಡೋ ಪದ್ದತಿ ಗೊತ್ತಿಲ್ಲ. ಸಜ್ಜನಿಕೆಯಿಂದ ಜನರ ಕಷ್ಟಗಳಿಗೆ ಸ್ಪಂದಿಸೋದು ಮಾತ್ರ ಗೊತ್ತು ಎಂದು ಪರೋಕ್ಷವಾಗಿ ಮುದ್ದಹನುಮೇಗೌಡರ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ಜಿ.ಪರಮೇಶ್ವರ ಆಪ್ತ ಮುರುಳೀಧರ್ ಹಾಲಪ್ಪ ಹರಿಹಾಯ್ದಿದ್ದಾರೆ.
ಮುದ್ದಹನುಮೇಗೌಡರಿಗೆ ಟಿಕೆಟ್ ಕೊಟ್ಟರೆ ಹೇಗೆ ಸಪೋರ್ಟ್ ಮಾಡಲು ಆಗುತ್ತದೆ ? ಅಮದು ಅಭ್ಯರ್ಥಿಗೆ ಟಿಕೆಟ್ ಕೊಡಬಾರದು ಎಂದು ಒಕ್ಕೊರಲಿನ ತೀರ್ಮಾನ ಆಗಿತ್ತು. ನಮ್ಮ ಪಕ್ಷ ಏನೂ ಬರಡಾಗಿಲ್ಲ…ನಮ್ಮಲ್ಲೇ ಸಮರ್ಥರಿದ್ದಾರೆ ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುದ್ದಹನುಮೇಗೌಡರು ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದ್ದಾರೆ. ಅವರೆಲ್ಲ ಈಗ ಸುಮ್ಮನಿರೋದಿಲ್ಲ. ಪರೋಕ್ಷವಾಗಿ ಕಾಂಗ್ರೆಸ್ ನವರೇ ಮುದ್ದಹನುಮೇಗೌಡರನ್ನು ಸೋಲಿಸುತ್ತಾರೆ ಎಂದು ಮುರುಳೀಧರ್ ಹಾಲಪ್ಪ ತಿಳಿಸಿದರು.