ಮೈಸೂರು: ಭಾರತದ ಧಾರ್ಮಿಕ ಇತಿಹಾಸದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ದೇವಸ್ಥಾನ ಉದ್ಘಾಟನೆಯಾಗುತ್ತಿರುವುದು ಸುವಣಾಕ್ಷರದಲ್ಲಿ ಬರೆಯುವ ದಿನವಾಗಿದ್ದು. ಭಾರತದೇಶ ರಾಮರಾಜ್ಯವಾಗಿ ಬೆಳಗಲಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ತಿಳಿಸಿದರು.
ಶಿವರಾಂಪೇಟೆಯಲ್ಲಿರುವ ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ವತಿಯಿಂದ ನಡೆದ ಸಮಾರಂಭದಲ್ಲಿ ಶ್ರೀರಾಮ ದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಿಹಿ ವಿತರಿಸಿ ಮಾತನಾಡಿದ ಅವರು ರಾಜ್ಯದ ಎಲ್ಲಾ ಹಳ್ಳಿಗಳಲ್ಲಿಯೂ ಶ್ರೀರಾಮಮಂದಿರಗಳಿವೆ, ಎಲ್ಲರ ಮನೆಗಳಲ್ಲಿಯೂ ಶ್ರೀರಾಮನ ಫೋಟೋ ಇದೆ. ಇಡೀ ಪ್ರಪಂಚದ ಜನರು ಅಯೋಧ್ಯೆಯ ಕಡೆ ತಿರುಗಿ ನೋಡುತ್ತಿದ್ದಾರೆ. ಶ್ರೀರಾಮನನ್ನು ಕೆತ್ತಿರುವ ಶಿಲೆ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ದೊರೆತಿದ್ದು.
ಅದನ್ನು ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಮೈಸೂರಿನವರಾಗಿರುವುದು ಹೆಮ್ಮೆಯ ವಿಷಯವಾಗಿದೆ. ಅಯೋಧ್ಯೆಯ ಶ್ರೀರಾಮನ ದರ್ಶನ ಮಾಡುವುದಕ್ಕಿಂತ ಮುಂಚೆ ಶ್ರೀರಾಮನ ಶಿಲೆ ಸಿಕ್ಕ ಹಾರೋಹಳ್ಳಿಗೆ ಭೇಟಿ ನೀಡುವುದು ಸಂಪ್ರದಾಯವಾಗಬೇಕು. ಪ್ರತಿಯೊಬ್ಬರಿಗೂ ಶ್ರೀರಾಮನ ದೇವಸ್ಥಾನ ಉದ್ಘಾಟನೆಯಾಗುತ್ತಿರುವುದು ಸಂತೋಷವಾಗಿದೆ. ಪ್ರತಿಯೊಬ್ಬ ಹಿಂದುಗಳ ಮನೆಯಲ್ಲಿಯೂ ಇಂದು ಹಬ್ಬವನ್ನು ಆಚರಿಣೆ ಮಾಡುತ್ತಿದ್ದಾರೆ. ಶ್ರೀರಾಮನ ಕೃಪೆಯಿಂದ ಇಡೀ ದೇಶದಲ್ಲಿ ಶಾಂತಿ ನೆಲಸಲಿ ಮಳೆ-ಬೆಳೆ ಚೆನ್ನಾಗಿ ಆಗಿ ಜನರು ನೆಮ್ಮದಿಯಿಂದ ಬದುಕಲಿ, ಶ್ರೀರಾಮ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಹಾರೈಸುವರು.

ಸಾಹಿತಿ ಡಾ.ಸಿ.ಪಿ ಕೃಷ್ಣಕುಮಾರ್ ಮಾತನಾಡಿ ಶ್ರೀರಾಮ ಅವತಾರ ಪುರುಷನಾಗಿದ್ದು ರಾಮನ ಆದರ್ಶ ಎಲ್ಲರಿಗೂ ಅಗತ್ಯವಾಗಿದೆ. ಪ್ರತಿಯೊಬ್ಬ ಪುರುಷನು ರಾಮನಾಗಿರಬೇಕು, ಪ್ರತಿಯೊಬ್ಬ ಸ್ತ್ರೀಯೂ ಸೀತೆಯಾಗಿರಬೇಕು. ಶ್ರೀರಾಮ ಪರಿಪೂರ್ಣ ವ್ಯಕ್ತಿಯಾಗಿದ್ದು ಶ್ರೀರಾಮನ ಮಾನವೀಯ ಗುಣಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಭಾರತ ರಾಮರಾಜ್ಯವಾಗಬೇಕು ಎಂದರು. ಈ ಸಂದರ್ಭದಲ್ಲಿ ಜೆ.ಡಿ.ಎಸ್. ಜಿಲ್ಲಾ ಒಬಿಸಿ ಅಧ್ಯಕ್ಷ ಅಪೆಕ್ಸ್ ಶ್ರೀನಿವಾಸ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ವೈ.ಡಿ.ರಾಜಣ್ಣ, ಬೆಟ್ಟೇಗೌಡ, ಲಕ್ಷ್ಮಿ, ರಮೇಶ್ ಹಾಜರಿದ್ದರು.