ಮೈಸೂರು : ಸಾಲ ತೀರಿಸಲು ಹಣ ನೀಡದ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ನಗರದ ರಾಜೀವ್‌ನಗರದಲ್ಲಿ ನಡೆದಿದ್ದು, ಕೊಲೆ ಆರೋಪಿ ಅಕ್ಬರ್ ಆಲಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ನವೀದಾ ಬಿ ಎಂಬುವರೇ ಪತಿಯಿಂದ ಕೊಲೆಯಾದ ಮಹಿಳೆ.
ಮಂಡ್ಯ ಜಿಲ್ಲೆಯ ನಿವಾಸಿ ಅಕ್ಬರ್ ಆಲಿಯನ್ನು ಮೃತ ನವೀದಾ ಬಿ ೧೩ ವರ್ಷಗಳ ಹಿಂದೆ ವಿವಾಹವಾಗಿದ್ದರು. ಮೈಸೂರಿನ ರಾಜೀವ್ ನಗರದಲ್ಲಿ ಮೂರು ಮಕ್ಕಳೊಂದಿಗೆ ಸಂಸಾರ ನೆಲೆಸಿತ್ತು. ಮಂಡ್ಯಾದಲ್ಲಿ ಆಟೋ ಓಡಿಸುತ್ತಿದ್ದ ಅಕ್ಬರ್ ಆಲಿಗೆ ಹೃದಯಾಘಾತವಾದ ಹಿನ್ನಲೆ ಪತ್ನಿ ಮನೆಯವರು ಚಿಕಿತ್ಸೆ ಕೊಡಿಸಿ ಬದುಕಿಸಿಕೊಂಡಿದ್ದರು.
ನಂತರ ಗೂಡ್ಸ್ ಆಟೋ, ಪ್ರಾವಿಷನ್ ಸ್ಟೋರ್ಸ್, ಆಟೋ ಮೊಬೈಲ್ಸ್ ಅಂಗಡಿ ಹೀಗೆ ಹಲವು ವ್ಯಾಪಾರ ಮಾಡಲು ಅಕ್ಬರ್ ಆಲಿಗೆ ಪತ್ನಿ ನವೀದಾ ಬಿ ಮನೆಯವರು ಆರ್ಥಿಕ ಸಹಾಯ ನೀಡಿದ್ದರು. ಎಲ್ಲಾ ಬಂಡವಾಳವನ್ನ ತಿಂದು ತೇಗಿದ್ದ ಅಕ್ಬರ್ ಆಲಿ ಮತ್ತಷ್ಟು ಸಾಲಗಾರನಾಗಿದ್ದ. ತಾನು ಮಾಡಿದ ಸಾಲ ತೀರಿಸಲು ಪತ್ನಿಯ ಮೊರೆ ಹೋಗುತ್ತಿದ್ದ. ಆಗಾಗ ನವೀದಾ ಬಿ ರವರು ನಡೆಸುತ್ತಿದ್ದ ಪುಟ್ಟ ಅಂಗಡಿಯಲ್ಲಿ ದುಡಿದು ಗಂಡನ ಸಾಲ ತೀರಿಸುತ್ತಿದ್ದರು. ಒಂದೆಡೆ ಸಾಲ ತೀರಿಸಿದರೆ ಮತ್ತೊಂದೆಡೆ ಸಾಲ ಮಡುತ್ತಿದ್ದ ಪತಿ ಜೊತೆ ಪತ್ನಿ ಆಗಾಗ ಗಲಾಟೆ ಮಾಡುತ್ತಿದ್ದರು.
ಭಾನುವಾರ ಇದೇ ವಿಚಾರದಲ್ಲಿ ಗಲಾಟೆ ಆಗಿದೆ. ಇದ್ದಕ್ಕಿದ್ದಂತೆ ನವೀದಾ ಬೀ ರವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಅಕ್ಬರ್ ಆಲಿಯನ್ನ ಪ್ರಶ್ನಿಸಿದಾಗ ತಂದೆ ಮನೆಗೆ ಹೋಗಿದ್ದಾಳೆ, ಅಂಗಡಿಯಲ್ಲಿ ಇದ್ದಾಳೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದ. ಅಕ್ಕಪಕ್ಕದ ಮನೆಯವರನ್ನ ಕೇಳಿದಾಗ ಇಬ್ಬರ ನಡುವೆ ನಡೆದ ಗಲಾಟೆ ವಿಚಾರ ತಿಳಿಸಿದರು.
ಅನುಮಾನಗೊಂಡು ಬೀಗ ಹಾಕಿದ್ದ ಮನೆ ಬಾಗಿಲನ್ನ ಒಡೆದು ನೋಡಿದಾಗ ನವೀದಾ ಬೀ ಅಸ್ವಸ್ಥರಾಗಿ ಕುಳಿತ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಕುತ್ತಿಗೆ ಮೇಲೆ ಗಾಯದ ಗುರುತುಗಳು ಕಂಡು ಬಂದಿದೆ. ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಅಕ್ಬರ್ ಆಲಿಯನ್ನ ಬಂಧಿಸಿ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.